ಜಿಲ್ಲೆ

ಮಕ್ಕಳು ಪಠ್ಯೇತರ ಚಟುವಟಿಕೆಗಳಲೂ ಭಾಗವಹಿಸುವಂತಾಗಲಿ

ಕೊಳ್ಳೇಗಾಲ: ಮಕ್ಕಳು ಪಠ್ಯಕ್ಕೆ ಸಿಮೀತವಾಗದೆ ಪಠ್ಯೇತರ ಚಟುವಟಿಕೆಗಳಲೂ ಭಾಗವಹಿಸಬೇಕು. ಇದ್ದರಿಂದ ಸೋಲು-ಗೆಲುವಿನ ಪಾಠ ತಿಳಿಯುತ್ತದೆ ಎಂದು ಹನೂರು ಶಾಸಕ ಎಂ.ಆರ್.ಮಂಜುನಾಥ್ ಹೇಳಿದರು.


ಜಿಲ್ಲಾ ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಹಾಗು ಶಿವ ವಿದ್ಯಾಕೇಂದ್ರದ ಸಹಯೋಗದಲ್ಲಿ ಪಟ್ಟಣದ ಶ್ರೀ ಮಹದೇಶ್ವರ ಕಾಲೇಜು ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.


ಆಟೋಟ ಸ್ಪರ್ಧೆಗಳಲ್ಲಿ ಸೋಲು-ಗೆಲುವು ಸಾಮಾನ್ಯ. ಇವೆರಡೂ ಒಂದೇ ನಾಣ್ಯದ 2 ಮುಖಗಳಿದ್ದಂತೆ. ಕ್ರೀಡಾಪಟುಗಳು ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದರು.


ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅರಳುವ ಕ್ರೀಡಾ ಪ್ರತಿಭೆಗಳಿಗೆ ಅಧಿಕಾರಿಗಳು ಪ್ರೋತ್ಸಾಹ ನೀಡಬೇಕಿದೆ. ಅಂತಹವರನ್ನು ಗುರುತಿಸಿ ತಿಳಿಸಿದರೆ ಅವರನ್ನು ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ಗೆ ಸೇರಿಸುವ ಕೆಲಸ ಮಾಡಲಾಗುವುದು ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ತಾಲೂಕು ಮಟ್ಟದ ಕ್ರೀಡಾ ಪ್ರತಿಭೆಗಳನ್ನು ಜಿಲ್ಲಾ ಮತ್ತು ರಾಜ್ಯ ಮಟ್ಟಕ್ಕೆ ಕಳುಹಿಸಿಕೊಡುವ ಜವಾಬ್ದಾರಿ ದೈಹಿಕ ಶಿಕ್ಷಣ ಶಿಕ್ಷಕರದ್ದು. ಕ್ರೀಡಾಕೂಡದಲ್ಲಿ 44 ಪ್ರೌಢಶಾಲೆಗಳು, 70 ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳು ಭಾಗವಹಿಸಿದ್ದು, ಎಲ್ಲರೂ ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸಿದರು.


ನಗರಸಭೆ ಸದಸ್ಯ ಶಾಂತರಾಜು, ಸುಮಾ ಸುಬ್ಬಣ್ಣ, ಶಂಕರ ನಾರಾಯಣಗುಪ್ತ, ಧರಣೇಶ್, ಕ್ರೀಡಾಕೂಟ ಆಯೋಜಕ ಶಿವ ವಿದ್ಯಾಕೇಂದ್ರದ ಕಾರ್ಯದರ್ಶಿ ದಿನೇಶ್, ಅಧ್ಯಕ್ಷರಾದ ರುದ್ರಾಂಭ ಶಿವರುದ್ರಸ್ವಾಮಿ, ದೈಹಿಕ ಶಿಕ್ಷಣ ಪರಿವೀಕ್ಷಕ ಸ್ಟೀವನ್, ಬಿ.ಆರ್.ಸಿ. ಮಹದೇವ ಕುಮಾರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ನಂದೀಶ್ ಮತ್ತಿತರಿದ್ದರು.