ಗೋಣಿಕೊಪ್ಪಲು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿರಾಜಪೇಟೆ-ಗೋಣಿಕೊಪ್ಪ ವಲಯ ವ್ಯಾಪ್ತಿಯ ಹರಿಶ್ಚಂದ್ರಪುರ ಕಾರ್ಯ ಕ್ಷೇತ್ರ ವತಿಯಿಂದ ಮಾದಕ ವಸ್ತು ವಿರೋಧಿ ದಿನ ಆಚರಿಸಲಾಯಿತು.
ಕಾವೇರಮ್ಮ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಇಲ್ಲಿನ ಆರಕ್ಷಕ ಠಾಣೆಯ ಮಹಿಳಾ ಹೆಡ್ ಕಾನ್‌ಸ್ಟೇಬಲ್ ಕಾವೇರಮ್ಮ ಉದ್ಘಾಟಿಸಿದರು. ಬಳಿಕ ಮಾದಕ ವಸ್ತು ಬಳಕೆಯಿಂದಾಗುವ ತೊಡಕುಗಳ ಕುರಿತು ಜಾಗೃತಿ ಮೂಡಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕೃಷ್ಣ ಚೈತನ್ಯ ಮಾತನಾಡಿ, ಇಂದಿನ ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಾಲಕರು ಜಾಗ್ರತೆ ವಹಿಸಬೇಕು ಎಂದರು.
ಮಾದಕ ವಸ್ತು ಎಂದರೇನು, ಯಾವೆಲ್ಲ ಇವೆ, ಅದರಿಂದ ಆಗುವ ದುಷ್ಪರಿಣಾಮಗಳು ಯಾವುವು, ಇದನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಒಕ್ಕೂಟದ ಅಧ್ಯಕ್ಷೆ ಲತಾ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳಾದ ಸುಧಾ, ರಾಜೇಶ್ವರಿ, ವಲಯ ಮೇಲ್ವಿಚಾರಕಿ ದನೀಶ್, ಕಾರ್ಯ ಕ್ಷೇತ್ರದ ಸೇವಾ ಪ್ರತಿನಿಧಿ ಸರಿತಾ ಇತರರಿದ್ದರು.