ಮುದ್ದೇಬಿಹಾಳ ತಾಲೂಕಿನ ಇಂಗಳಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಜಯವಾಣಿಯ ವಿದ್ಯಾರ್ಥಿ ಮಿತ್ರ ವಿತರಿಸಲಾಯಿತು. ಎಚ್.ಎಲ್.ಕರಡ್ಡಿ, ಸಿ.ಎಸ್.ತೆಗ್ಗಿನಮನಿ, ಸಾವಿತ್ರಿ ಸಾಸನೂರ, ಡಿ.ಬಿ.ವಡವಡಗಿ, ಸಿದ್ದು ಚಲವಾದಿ, ಶಿಕ್ಷಕರು ಇದ್ದಾರೆ. 
ಜಿಲ್ಲೆ

ಮಕ್ಕಳು ದಿನಪತ್ರಿಕ ಓದುವ ಹವ್ಯಾಸ ಹೊಂದಲಿ

ಮುದ್ದೇಬಿಹಾಳ: ಸಾಮಾನ್ಯ ಜ್ಞಾನ ಬೆಳೆಯಲು ಪ್ರತಿಯೊಬ್ಬರೂ ವಿದ್ಯಾರ್ಥಿ ದೆಸೆಯಿಂದಲೇ ದಿನಪತ್ರಿಕೆಗಳು, ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ಸಮಗ್ರ ಮಾಹಿತಿ ಇರುವ ನಿಯತಕಾಲಿಕ, ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಎಚ್.ಎಲ್.ಕರಡ್ಡಿ ಹೇಳಿದರು.

ತಾಲೂಕಿನ ಇಂಗಳಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸುಧಾರಣೆ ಹಿನ್ನೆಲೆ ತಮ್ಮ ಪ್ರಾಯೋಜಕತ್ವದಲ್ಲಿ ವಿಜಯವಾಣಿ ದಿನಪತ್ರಿಕೆಯ ವಿದ್ಯಾರ್ಥಿ ಉದ್ಯೋಗ ಮಿತ್ರ ಉಚಿತ ವಿತರಣೆಗೆ ಸೋಮವಾರ ಚಾಲನೆ ನೀಡಿ, ವಿದ್ಯಾರ್ಥಿ ಮಿತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆಯ ಭಾಗವಾಗಿ ಇಂಥ ಪತ್ರಿಕೆಗಳನ್ನು ಪ್ರತಿಯೊಂದು ಶಾಲೆಯಲ್ಲೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸಲು ದಾನಿಗಳು, ಶಿಕ್ಷಣ ಪ್ರೇಮಿಗಳು ಮುಂದೆ ಬರಬೇಕು. ಇದರಿಂದ ಗ್ರಾಮೀಣ ಬಡ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಭವಿಷ್ಯದ ಶಿಕ್ಷಣಕ್ಕೆ ಇಂಥ ಯೋಜನೆಗಳು ಉಪಯುಕ್ತವಾಗುತ್ತವೆ. ಇಂಥ ಮಾಹಿತಿಪೂರ್ಣ ಪತ್ರಿಕೆಗಳನ್ನು ವಿದ್ಯಾರ್ಥಿಗಳು ಓದಿದ ನಂತರ ಸಂಗ್ರಹಿಸಿ ಇಡುವ ಪದ್ಧತಿ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರೂ ಈ ಪತ್ರಿಕೆಗಳ ಪ್ರಯೋಜನ ಪಡೆದುಕೊಂಡು ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬೇಕು ಎಂದರು.

ಮುಖ್ಯ ಅತಿಥಿ- ಗ್ರಾಪಂ ಅಧ್ಯಕ್ಷೆ ಸಾವಿತ್ರಿ ರಮೇಶ ಸಾಸನೂರ (ಪೋಲೇಶಿ) ಮಾತನಾಡಿ, ವಿದ್ಯಾರ್ಥಿಗಳ ಜೀವನ ನಿಂತ ನೀರಾಗದೆ ಸದಾ ಹರಿಯುವ ನೀರಿನಂತಿರಬೇಕು. ಕರಡ್ಡಿ ಅವರಂಥ ಹಿರಿಯ ಶಿಕ್ಷಣ ಪ್ರೇಮಿಗಳು ಉಚಿತವಾಗಿ ಒದಗಿಸಿರುವ ವಿದ್ಯಾರ್ಥಿ ಮಿತ್ರ ಎನ್ನುವ ಮಾಹಿತಿ ಕಣಜವನ್ನು ಸದುಪಯೋಗ ಮಾಡಿಕೊಳ್ಳಬೇಕು. ಟಿವಿ ನೋಡುವುದು, ಮೊಬೈಲ್ ಬಳಸುವುದು ಕಡಿಮೆ ಮಾಡಿ ಪರೀಕ್ಷೆ ಎದುರಿಸುವತ್ತ ಹೆಚ್ಚಿನ ಗಮನ ಹರಿಸಬೇಕು. ಅಗತ್ಯ ಬಿದ್ದರೆ ನಾನೂ ಕೂಡ ಎಂಟನೇಯ ತರಗತಿವರೆಗೆ ಉಚಿತವಾಗಿ ಮನೆಪಾಠ ಹೇಳಲು ಸಿದ್ಧಳಿದ್ದೇನೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಾಧ್ಯಾಪಕ ಸಿ.ಎಸ್.ತೆಗ್ಗಿನಮನಿ ಮಾತನಾಡಿ, ತಮ್ಮ ಸೇವಾ ನಿವೃತ್ತಿಯ ಸವಿ ನೆನಪಿಗಾಗಿ ಕರಡ್ಡಿ ಅವರು ತಮ್ಮ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಒದಗಿಸಿದ್ದು ಶ್ಲಾಘನೀಯ. ವಿದ್ಯಾರ್ಥಿಗಳು ಇದರ ಉಪಯೋಗ ಪಡೆದು ಕರಡ್ಡಿ ಅವರ ಹೆಸರು, ಶಾಲೆಯ ಹೆಸರು ಉನ್ನತ ಮಟ್ಟಕ್ಕೆ ಏರುವಂತೆ ನೋಡಿಕೊಳ್ಳಬೇಕು. ಹೊಸ ವರ್ಷದಲ್ಲಿ ನಮ್ಮ ಜವಾಬ್ದಾರಿಗಳನ್ನು ಅರಿತು ಮುನ್ನಡೆಯಬೇಕು. ಸತತ ಅಧ್ಯಯನದ ದೃಢಸಂಕಲ್ಪ ಮಾಡಬೇಕು. ಪಠ್ಯಕ್ಕೆ ಸೀಮಿತವಾಗದೆ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವ ಕೊಡಬೇಕು ಎಂದರು.

ಇದೇ ವೇಳೆ ಕೇಕ್ ಕತ್ತರಿಸಿ ಹೊಸ ವರ್ಷವನ್ನು ಸಂಭ್ರಮಿಸಿ ಎಲ್ಲರಿಗೂ ಶುಭ ಕೋರಲಾಯಿತು. ವಿಜಯವಾಣಿಯ ಗ್ರಾಮೀಣ ಪ್ರತಿನಿಧಿ ಸಿದ್ದು ಚಲವಾದಿ, ಸ್ಥಳೀಯ ಪತ್ರಿಕೆ ವಿತರಕ ಬಸವರಾಜ ಕುಂಟೋಜಿ, ಶಿಕ್ಷಕರಾದ ವಿ.ವಿ.ಕೋರಿ, ಎಲ್.ಎನ್.ಭೋವಿ, ಎಸ್.ಜಿ.ಕೂಡಗಿ ವೇದಿಕೆಯಲ್ಲಿದ್ದರು.

ಶಿಕ್ಷಕ ಕೆ.ಎಸ್.ಪಟೇಲ ಸ್ವಾಗತಿಸಿದರು. ವಿಜಯವಾಣಿ ಪ್ರತಿನಿಧಿ ಡಿ.ಬಿ.ವಡವಡಗಿ ಅವರು ವಿದ್ಯಾರ್ಥಿ ಉದ್ಯೋಗ ಮಿತ್ರದಿಂದ ಆಗುವ ಪ್ರಯೋಜನಗಳು ಮತ್ತು ಪರೀಕ್ಷೆ ಲಿತಾಂಶ ಸುಧಾರಣೆಯಲ್ಲಿ ವಿದ್ಯಾರ್ಥಿ ಮಿತ್ರದಲ್ಲಿ ಬರುವ ಮಾಹಿತಿಗಳ ಮಹತ್ವದ ಕುರಿತು ಪ್ತಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಎನ್.ಎಂ.ವಾಲೀಕಾರ ನಿರೂಪಿಸಿದರು. ಶಿಕ್ಷಕ ವಿ.ಎಸ್.ಗಣಾಚಾರಿ ವಂದಿಸಿದರು.