ರಾಯಚೂರಿನ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನಿಂದ ಭಾನುವಾರ ಆಯೋಜಿಸಿದ್ದ ಮಕ್ಕಳ ಸಾಹಿತ್ಯೋತ್ಸವವನ್ನು ಹಿರಿಯ ಸಾಹಿತಿ ಪ್ರೊ.ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ ಉದ್ಘಾಟಿಸಿದರು. ಸಾಹಿತಿಗಳಾದ ಮಹಾಂತೇಶ ಮಸ್ಕಿ, ಡಾ.ತಿಮ್ಮಯ್ಯ ಶೆಟ್ಟಿ, ಡಾ.ಕೆ.ಶಶಿಕಾಂತ, ಗಿರಿಜಾ ಹಳೆಮನೆ, ಪರಿಷತ್ ಗೌರವಾಧ್ಯಕ್ಷ ಡಾ.ಪರಮೇಶರಪ್ಪ ಸಾಲಿಮಠ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದರ ಇದ್ದರು. 
ಜಿಲ್ಲೆ

ಮಕ್ಕಳು ತಮ್ಮ ಬಾಲ್ಯ ಕಳೆದುಕೊಳ್ಳುತ್ತಿದ್ದಾರೆ

ರಾಯಚೂರು: ಮಕ್ಕಳು ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿದ್ದು, ಕೇವಲ ಓದು, ಶಾಲೆ ಮತ್ತು ಮೊಬೈಲ್‌ನಲ್ಲಿಯೇ ತಮ್ಮ ಬಾಲ್ಯವನ್ನು ಕಳೆಯುತ್ತಿರುವುದರಿಂದ ಅವರಲ್ಲಿನ ಮುಗ್ಧತೆ ಮಾಯವಾಗುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ.ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ ಖೇದ ವ್ಯಕ್ತಪಡಿಸಿದರು.
ಸ್ಥಳೀಯ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನಿಂದ ಭಾನುವಾರ ಏರ್ಪಡಿಸಿದ್ದ ಮಕ್ಕಳ ಸಾಹಿತ್ಯೋತ್ಸವ ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳು ಆಟ, ಪಠ್ಯೇತರ ಚಟುವಟಿಕೆಗಳಿಂದ ದೂರವಾಗುತ್ತಿದ್ದು, ಅವರ ಜೀವನದಲ್ಲಿ ನಲಿವು ಕಾಣುತ್ತಿಲ್ಲ ಎಂದರು.
ಹಿಂದ ಕುವೆಂಪು, ರಾಜರತ್ನಂ ಸೇರಿದಂತೆ ಹಲವು ಖ್ಯಾತ ಸಾಹಿತಿಗಳು ಮಕ್ಕಳ ಸಾಹಿತ್ಯ ರಚನೆ ಮಾಡಿದ್ದರು. ಆದರೆ ಇಂದು ಮಕ್ಕಳ ಸಾಹಿತ್ಯ ರಚನೆ ಮರೆಯಾಗುತ್ತಿದ್ದು, ವೈಚಾರಿಕತೆ ಹೆಸರಿನಲ್ಲಿ ಸಾಹಿತ್ಯ ರಚನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಮಕ್ಕಳನ್ನು ಹೆತ್ತು, ಪಾಲನೆ ಮಾಡುವ ಮಹಿಳೆಯರು ಮಕ್ಕಳ ಸಾಹಿತ್ಯ ಕೃಷಿಯತ್ತ ಗಮನ ಹರಿಸಬೇಕು ಎಂದು ಪ್ರೊ.ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ ಹೇಳಿದರು.
ಸಾಹಿತಿ ಮಹಾಂತೇಶ ಮಸ್ಕಿ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಮೊಬೈಲ್ ಮಕ್ಕಳ ಬಾಲ್ಯವನ್ನು ನುಂಗಿ ಹಾಕುತ್ತಿದ್ದು, ಹಿಂದಿನ ಮಕ್ಕಳ ಬಾಲ್ಯ ಹೇಗಿತ್ತು ಎನ್ನುವುದನ್ನು ತಿಳಿಸಿಕೊಡುವುದು ಮಕ್ಕಳ ಸಾಹಿತಿಗಳು ಮಾತ್ರ. ಹೆಸರು ಮಾಡಿದ ಸಾಹಿತಿಗಳು ಮಕ್ಕಳ ಸಾಹಿತ್ಯ ರಚನೆ ಮಾಡಿದರೆ ಹೆಚ್ಚಿನ ಶಕ್ತಿ ಬರುತ್ತದೆ.
ವೈಚಾರಿಕತೆ ಪ್ರಬಲವಾಗಿ ಬೆಳೆಯುತ್ತಿದೆ. ಆದರೆ ಅದು ಆಚರಣೆಗೆ ಬರುತ್ತಿಲ್ಲ, ವೌಢ್ಯಾಚರಣೆಯೂ ಕಡಿಮೆಯಾಗುತ್ತಿಲ್ಲ. ಕಳೆದುಕೊಳ್ಳುವತ್ತ ಇರುವ ಸ್ಪರ್ಧೆಯನ್ನು ಪಡೆದುಕೊಳ್ಳುವತ್ತ ಪರಿವರ್ತನೆ ಮಾಡಬೇಕಾಗಿದೆ. ಅದು ಮಕ್ಕಳ ಸಾಹಿತ್ಯಕ್ಕೂ ಅನ್ವಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಂಕರದೇವರು ಹಿರೇಮಠರ ಪಾರಿಜಾತ ಪರಿಮಳ, ಮಂಡಲಗಿರಿ ಪ್ರಸನ್ನರ ಹೊಳೆದಂಡೆ ಮತ್ತು ಬೆಳ್ಳಕ್ಕಿಗಳು, ಗುಂಡುರಾವ್ ದೇಸಾಯಿಯರ ಮಕ್ಕಳೇನು ಸಣ್ಣವರಲ್ಲ, ಡಿ.ಕೋಮಲರ ಜೈ ಗಣತಿ, ಶಕುಂತಲಾ ಹಿರೇಮಠರ ಚಿಣ್ಣರ ಅಂಗಳ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
ಪರಿಷತ್ ಜಿಲ್ಲಾಧ್ಯಕ್ಷ ಶಂಕರದೇವರು ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಬಸವರಾಜ ಬೋರೆಡ್ಡಿ, ಸಾಹಿತಿಗಳಾದ ಡಾ.ತಿಮ್ಮಯ್ಯ ಶೆಟ್ಟಿ, ಡಾ.ಕೆ.ಶಶಿಕಾಂತ, ಗಿರಿಜಾ ಹಳೆಮನೆ, ಪರಿಷತ್ ಗೌರವಾಧ್ಯಕ್ಷ ಡಾ.ಪರಮೇಶರಪ್ಪ ಸಾಲಿಮಠ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದರ, ಕಸಾಪ ಗೌರವ ಕಾರ್ಯದರ್ಶಿ ರಾವುತ್‌ರಾವ್ ಬರೂರ ಉಪಸ್ಥಿತರಿದ್ದರು.