ಜಿಲ್ಲೆ

ಮಕ್ಕಳಿರಿಗೆ ಇನ್ನೂ ‘ಸಂಭ್ರಮ ಶನಿವಾರ’

ಮಂಜುನಾಥ ಟಿ.ಭೋವಿ ಮೈಸೂರು

ನಿತ್ಯ ಕಿರಿಕಿರಿಗೆ ಕಾರಣವಾಗಿರುವ ಬ್ಯಾಗ್ ಹೊರೆಗೆ ತಿಂಗಳಿನಲ್ಲಿ ಒಂದು ದಿನದ ಮಟ್ಟಿಗಾದರೂ ಶಾಲಾ ಮಕ್ಕಳಿಗೆ ಮುಕ್ತಿ ದೊರೆಯಲಿದೆ. ಇದು ವಿದ್ಯಾರ್ಥಿಗಳ ಸಂಭ್ರಮಕ್ಕೆ ನಾಂದಿ ಹಾಡುವ ಮೂಲಕ ನಲಿ-ಕಲಿಗೆ ಪ್ರೇರಣೆಯಾಗಿದೆ.


‘ಸಂಭ್ರಮ ಶನಿವಾರ’ ಹೆಸರಿನಲ್ಲಿ ಪ್ರತಿ ತಿಂಗಳ ಒಂದು ಶನಿವಾರದಂದು ಬ್ಯಾಗ್ ರಹಿತ ದಿನವನ್ನಾಗಿ ಆಚರಣೆ ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮುಂದಾಗಿದೆ. ಈ ಕುರಿತು ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರು ಈಗಾಗಲೇ ಸುತ್ತೋಲೆ ಹೊರಡಿಸಿದ್ದಾರೆ. ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ತಿಂಗಳು ಒಂದು ಶನಿವಾರದಂದು ಸಂಭ್ರಮ ಶನಿವಾರ ಬ್ಯಾಗ್ ರಹಿತ ದಿನವನ್ನು ಆಚರಿಸಲು ಸೂಚಿಸಲಾಗಿದೆ. ಅಂತೆಯೆ, ಇದಕ್ಕಾಗಿ ಮೈಸೂರು ಜಿಲ್ಲೆಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

ವಿದ್ಯಾರ್ಥಿಗಳಲ್ಲಿ ಸಡಗರ:

ಇದು ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಿಗೂ ಅನ್ವಯವಾಗಲಿದೆ. ಜಿಲ್ಲೆಯಲ್ಲಿ 2,112 ಸರ್ಕಾರಿ ಶಾಲೆ, 267 ಅನುದಾನಿತ ಶಾಲೆ, 899 ಅನುದಾನ ರಹಿತ ಶಾಲೆ, ಸಮಾಜ ಕಲ್ಯಾಣ ಮತ್ತು ಗಿರಿಜನ ಇಲಾಖೆಯ ಅಧೀನದ 75 ಶಾಲೆಗಳು, ಕೇಂದ್ರ ಸರ್ಕಾರದ ವ್ಯಾಪ್ತಿಯ (ಕೇಂದ್ರೀಯ ವಿದ್ಯಾಲಯ, ನವೋದಯ, ಟಿಬೇಟಿಯನ್ ಶಾಲೆ) 10 ಸೇರಿದಂತೆ ಒಟ್ಟು 3,363 ಶಾಲೆಗಳು ಬ್ಯಾಗ್ ರಹಿತ ದಿನವನ್ನು ಆಚರಣೆ ಮಾಡಲಿವೆ. 1ರಿಂದ 10ನೇ ತರಗತಿವರೆಗೆ ಜಿಲ್ಲೆಯಲ್ಲಿರುವ 4.21 ಲಕ್ಷ ವಿದ್ಯಾರ್ಥಿಗಳ ಸಡಗರಕ್ಕೆ ಇದು ಕಾರಣವಾಗಿದೆ. ಒಂದು ದಿನವಾದರೂ ಸಾಂಪ್ರದಾಯಿಕ ಕಲಿಕಾ ಭಾರವನ್ನು ಮರೆತು ಗೆಳೆಯರೊಂದಿಗೆ ಆಟವಾಡಿ, ಹಾಡಿ, ಕುಣಿದು, ನಲಿಯಲಿದ್ದಾರೆ.


ನಾಗರಿಕ ಪ್ರಜ್ಞೆ ಬೆಳೆಸಲು ಬಳಕೆ:

ಈ ದಿನವು ಮಕ್ಕಳನ್ನು ಬಹುಮುಖ ಚಟುವಟಿಕೆಗಳಲ್ಲಿ ತೊಡಗಿಸುವುದರ ಮೂಲಕ ನಾಗರಿಕಪ್ರಜ್ಞೆ ಬೆಳೆಸಲು ಬಳಕೆಯಾಗಬೇಕಿದೆ. ಅದಕ್ಕಾಗಿ ವಿದ್ಯಾರ್ಥಿಗಳಿಗಾಗಿ ವಿವಿಧ ಹತ್ತು ವಿಷಯಗಳಲ್ಲಿ ಸ್ವಯಂ ವಿವರಣಾತ್ಮಕ ಚಿತ್ರಸಹಿತ ಚಟುವಟಿಕೆ ಪುಸ್ತಕ ಹಾಗೂ ಅವುಗಳನ್ನು ತರಗತಿಗಳಲ್ಲಿ ನಿರ್ವಹಿಸಲು ಶಿಕ್ಷಕರಿಗೆ ಮಾರ್ಗದರ್ಶಿ ಕೈಪಿಡಿ ಸಿದ್ಧಪಡಿಸಿ ನೀಡಲಾಗಿದೆ.
ಕಲಿಕಾ ಚೇತರಿಕೆ ಉಪಕ್ರಮದಡಿ ವಿದ್ಯಾರ್ಥಿಗಳಲ್ಲಿ ಅನ್ವಯಿಕ ಕಲಿಕಾ ಮನೋಭಾವ ಉತ್ತೇಜಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕಲಿಕಾ ಹಾಳೆಗಳಲ್ಲಿ ಚಟುವಟಿಕೆ ನೀಡಲಾಗಿದೆ. ಈ ಕಲಿಕಾ ಹಾಳೆಗಳಲ್ಲಿನ ಚಟುವಟಿಕೆಗಳಿಗೆ ಪೂರಕವಾಗಿ ‘ಸಂಭ್ರಮ ಶನಿವಾರ’ ಚಟುವಟಿಕಾ ಪುಸ್ತಕವನ್ನೂ ರೂಪಿಸಬೇಕಾಗಿದೆ. ವಿಶೇಷವಾಗಿ ಮಾಸಿಕ ಸಮಾಲೋಚನಾ ಸಭೆಗಳು ನಡೆಯುವ ದಿನಗಳಂದು ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆಯಿರುವ ಸಂದರ್ಭದಲ್ಲಿ ಈ ಸಾಹಿತ್ಯವನ್ನು ಬಳಸಿಕೊಂಡು ‘ಸಂಭ್ರಮ ಶನಿವಾರ’ ಆಚರಿಸಲು ನಿರ್ದೇಶಿಸಲಾಗಿದೆ.


ದಿನದ ಮಟ್ಟಿಗೆ ಬಿಡುಗಡೆ:

ಶಾಲಾ ಅವಧಿಯ ರೋದನೆಯಾದ ಪಠ್ಯಕ್ರಮ, ಪರೀಕ್ಷೆಗಳು, ಅಂಕಗಳು, ನಿರಂತರ ಓದು-ಬರಹ, ಮಣಭಾರದ ಬ್ಯಾಗ್, ನಿಯೋಜಿತ ಕಾರ್ಯಗಳಂತಹ ಸವಲಕು ಚಟುವಟಿಕೆಗಳಿಗೆ ಮಕ್ಕಳು ರೋಸಿಹೋಗಿದ್ದಾರೆ. ಆದರೆ, ಇದೆಲ್ಲ ಅನಿವಾರ್ಯ ಎಂದು ಮಕ್ಕಳ ಮನಸ್ಸಿನಲ್ಲಿ ಬಿತ್ತಲಾಗಿದೆ. ತಿಂಗಳಿನಲ್ಲಿ ಒಂದು ದಿನವಾದರೂ ಇದರಿಂದ ಅವರಿಗೆ ಬಿಡುಗಡೆ ದೊರೆಯಲಿದೆ. ಸುಸ್ತು ಮಾಡುವ ಬ್ಯಾಗಿನ ಭಾರಕ್ಕೂ ಆ ದಿನ ಮುಕ್ತಿ ದೊರೆಯಲಿದೆ. ಅಂದು ಮಗು ಬ್ಯಾಗ್ ತರುವಂತಿಲ್ಲ. ಇದು ಮಕ್ಕಳು ಹಿರಿಹಿರಿ ಹಿಗ್ಗುವಂತೆ ಮಾಡಿದೆ.


ಮಾರ್ಗಸೂಚಿ ಉಲ್ಲಂಘನೆ:

ಬ್ಯಾಗ್ ಭಾರ ಮಕ್ಕಳಿಗೆ ಶಿಕ್ಷೆ ಎನ್ನುವಂತಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯವು ಸ್ಕೂಲ್ ಬ್ಯಾಗ್ ಪಾಲಿಸಿ -2020ರಲ್ಲಿ ಕೆಲವು ನಿಯಮ ರೂಪಿಸಿದೆ. ಬ್ಯಾಗಿನ ಭಾರವು ಮಗುವಿನ ತೂಕದ ಶೇ.10ರಷ್ಟು ಇರಬೇಕು ಎಂದು ಹೇಳಿದೆ. ಪ್ರತಿ ತರಗತಿಯ ಮಗುವು ಹೊಂದಿರಬೇಕಾದ ಬ್ಯಾಗಿನ ತೂಕದ ಪಟ್ಟಿ ನೀಡಿದೆ. 1 ಮತ್ತು 2ನೇ ತರಗತಿಯ ಮಕ್ಕಳಿಗೆ 1.6ರಿಂದ 2.2 ಕೆ.ಜಿ ಇದ್ದರೆ, 11 ಮತ್ತು 12ನೇ ತರಗತಿಗಳಿಗೆ 3.5ರಿಂದ 5 ಕೆ.ಜಿ ತೂಕದ ಬ್ಯಾಗ್ ಇರಬೇಕು. ಆದರೆ, ಈ ಮಾರ್ಗಸೂಚಿ ಬಹುತೇಕ ಶಾಲೆಗಳಲ್ಲಿ ಉಲ್ಲಂಘನೆಯಾಗುತ್ತಿದೆ. ಮೂಟೆ ಹೊತ್ತವರಂತೆ ಈಗಲೂ ಮಕ್ಕಳು ಬ್ಯಾಗ್ ಹೊತ್ತು ಶಾಲೆಗೆ ಹೋಗುವ ದೃಶ್ಯ ಸಾಮಾನ್ಯವಾಗಿದೆ.


ಉತ್ತಮ ಬೆಳವಣಿಗೆ:

ಸರ್ಕಾರದಿಂದ ಪುಸ್ತಕಗಳನ್ನು ಎರಡು ಭಾಗಗಳಲ್ಲಿ ಮುದ್ರಿಸಿ ಕೊಡಲಾಗಿದೆ. ಸಣ್ಣ ಮಕ್ಕಳು ತಮ್ಮ ಚಟುವಟಿಕೆ ಪುಸ್ತಕವನ್ನು ಶಾಲೆಯಲ್ಲಿಯೇ ಇರಿಸಬೇಕು ಎಂದು ತಿಳಿಸಲಾಗಿದೆ. ತುಂಬ ಮನೆಗೆಲಸ ಹೇರದೆ ಪಾಳಿ ಪದ್ಧತಿ ಅನುಸರಿಸಬೇಕು. ಮಕ್ಕಳು ತಮ್ಮ ಇಡೀ ಪುಸ್ತಕದ ರಾಶಿಯನ್ನು ಬ್ಯಾಗಿನಲ್ಲಿ ತುಂಬಿಕೊಂಡು ಬರದಂತೆ ನಿಗಾ ವಹಿಸಲು ಪಾಲಕರಿಗೆ ತಿಳಿಸಲಾಗಿದೆ. ಆದರೆ, ಈ ಯಾವುದೂ ಪಾಲನೆ ಆಗುತ್ತಿಲ್ಲ. ಇದನ್ನು ಮನಗಂಡು ಸಂಭ್ರಮ ಶನಿವಾರ ಆಚರಣೆಯನ್ನು ಜಾರಿ ತರಲಾಗಿದೆ. ತಂತ್ರಜ್ಞಾನ ಬಳಸಿ ಮಗುವಿನ ಬ್ಯಾಗ್ ಭಾರವನ್ನು ಇನ್ನಷ್ಟು ಕಡಿಮೆ ಮಾಡಬಹುದಾದರೂ ಸದ್ಯಕ್ಕೆ ತಿಂಗಳಿಗೊಮ್ಮೆ ಬ್ಯಾಗ್‌ರಹಿತ ದಿನವನ್ನಾಗಿ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ.

ಇದು ಸಹ ಹಳಿ ತಪ್ಪದಿರಲಿ:

ಬ್ಯಾಗ್ ಇಲ್ಲದೆ ಅದೇನು ಕಲಿಯುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ. ಶಿಕ್ಷಣ ಬರೀ ಪುಸ್ತಕ ನೋಡಿ ಕಲಿಯುವುದಲ್ಲ, ಮಗು ಪುಸ್ತಕವಿಲ್ಲದೆಯೂ ಕಲಿಯಬಹುದು. ಅದಕ್ಕೆ ನೂರೆಂಟು ಮಾರ್ಗಗಳಿವೆ. ಅಂತಹ ಹಲವು ರಹದಾರಿಗಳು ಈ ಕಾರ್ಯಕ್ರಮದಲ್ಲಿವೆ. ಸಾರ್ವಜನಿಕ ಸೌಕರ್ಯಗಳ ವಿಷಯದಲ್ಲಿ ಪೌಷ್ಟಿಕತೆ, ಸ್ವಾಸ್ಥ್ಯ ಮತ್ತು ಶುಚಿತ್ವ, ಮಕ್ಕಳ ಜವಾಬ್ದಾರಿ, ಆರೋಗ್ಯಪೂರ್ಣ ಜೀವನಶೈಲಿ, ಲಿಂಗತ್ವ ಸಮಾನತೆ, ಮಾದಕವಸ್ತು ದುರ್ಬಳಕೆ ತಡೆಗಟ್ಟುವಿಕೆ, ಹಿಂಸೆ, ಅಪರಾಧ, ಅಪಘಾತ ಸಂದರ್ಭಗಳಲ್ಲಿ ರಕ್ಷಣೆ ಹಾಗೂ ಭದ್ರತೆ, ಆಧುನಿಕ ತಂತ್ರಜ್ಞಾನ ಸಾಧನಗಳು ಮತ್ತು ಅಂತರ್ಜಾಲದ ಸದ್ಬಳಕೆ, ಸಾರ್ವಜನಿಕ ನೈರ್ಮಲ್ಯ- ಘನತ್ಯಾಜ್ಯದ ನಿರ್ವಹಣೆಯ ಅಗತ್ಯದಂತಹ ಹತ್ತಾರು ವಿಷಯಗಳನ್ನು ಸಂಭ್ರಮ ಶನಿವಾರದ ದಿನ ಬೇರೆ ಬೇರೆ ಚಟುವಟಿಕೆಗಳ ಮೂಲಕ ಕಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಶಿಕ್ಷಣ ಇಲಾಖೆ ಜಾರಿ ಮಾಡಿರುವ ಅನೇಕ ಕಾರ್ಯಕ್ರಮಗಳಂತೆ ಇದು ಸಹ ಹಳಿ ತಪ್ಪದಂತೆ ನೋಡಿಕೊಳ್ಳಬೇಕಾಗಿದೆ ಎಂಬುದು ಪಾಲಕರ ಆಶಯ.

ಜಿಲ್ಲೆಯ ಎಲ್ಲ ಶಾಲೆಯಲ್ಲೂ ಪ್ರತಿ ತಿಂಗಳಿನಲ್ಲಿ ಒಂದು ಶನಿವಾರ ‘ಸಂಭ್ರಮ ಶನಿವಾರ’ ಮೂಲಕ ಬ್ಯಾಗ್ ರಹಿತ ದಿನವನ್ನು ಆಚರಿಸಲಾಗುವುದು. ಇದಕ್ಕಾಗಿ ಎಲ್ಲ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಸಿದ್ಧತೆಯನ್ನು ಮಾಡಿಕೊಳ್ಳಲು ನಿರ್ದೇಶನ ನೀಡಲಾಗಿದೆ.ರಾಮಚಂದ್ರರಾಜೇ ಅರಸ್, ಡಿಡಿಪಿಐ