ಜಿಲ್ಲೆ

ಮಕ್ಕಳಿಗೆ ಸೋಂಕು ಎಂದಾಗ ಜೀವ ಧಸಕ್ ಎಂದಿತ್ತು...

ಹುಬ್ಬಳ್ಳಿ: ನನ್ನ ಮಕ್ಕಳಿಗೆಲ್ಲ ಕರೊನಾ ಸೋಂಕು ತಗುಲಿದೆ ಎಂದಾಗ ನನ್ ಜೀವ ಧಸಕ್ ಎಂದಿತ್ತು. ಆದರೆ, ಗುಣಮುಖವಾಗಿ ಬಂದಿದ್ದರಿಂದ ಹೊಸ ಜೀವನ ಸಿಕ್ಕಂತೆ ಆಗಿದೆ...

ಇಲ್ಲಿನ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಹೊರಬಂದ ವ್ಯಕ್ತಿ(ಪಿ-236) ‘ವಿಜಯವಾಣಿ’ಯೊಂದಿಗೆ ಮಾತನಾಡಿ ಹೀಗೆ ಹೇಳಿಕೊಂಡರು.

ಆಸ್ಪತ್ರೆಗೆ ದಾಖಲಾದ ಮಕ್ಕಳನ್ನು ನೋಡಿಕೊಳ್ಳಲು ನನ್ನ ಹೆಂಡತಿ ಬಂದು ಅಲ್ಲೇ ಇದ್ದಳು. ಕಣ್ಣೆದುರಿಗೆ ಮಕ್ಕಳು ಕಾಣುತ್ತಿದ್ದರೂ ಮುದ್ದಾಡುವಂತಿಲ್ಲ ಎಂದು ನಿತ್ಯ ಕಣ್ಣೀರು ಸುರಿಸುತ್ತಿದ್ದಳು. ನಾನೇ ಸಮಾಧಾನ ಮಾಡುತ್ತಿದ್ದೆ. ದೇವರಿದ್ದಾನೆ ಎಂದು ಧೈರ್ಯ ತುಂಬುತ್ತಿದ್ದೆ. ಹಾಗೆಯೇ ಆಯಿತು; ಪವಿತ್ರ ರಂಜಾನ್ ತಿಂಗಳಲ್ಲಿ ಗುಣಮುಖರಾಗಿ ಮನೆಗೆ ಬಂದೆವು ಎಂದು ಖುಷಿ ವ್ಯಕ್ತಪಡಿಸಿದರು.

ಮಕ್ಕಳು ಹೊರಗಡೆ ಹೋಗೋಣ ಎನ್ನುತ್ತಿದ್ದರು. ಸಮಾಧಾನ ಮಾಡುವುದು ಕಷ್ಟವಾಗುತ್ತಿತ್ತು. ಹಲವು ಸಲ ಅತ್ತುಬಿಟ್ಟಿದ್ದೇನೆ. ನನ್ನ ಸಹೋದರಿಯೂ ಪಕ್ಕದ ವಾರ್ಡ್​ನಲ್ಲಿ ಇದ್ದಾರೆ. ಬರೀ ದೂರದಿಂದಲೇ ಅವಳನ್ನು ಮಾತನಾಡಿಸುತ್ತಿದ್ದೆ. ಕಿಮ್್ಸ ಆಸ್ಪತ್ರೆ ವೈದ್ಯರು, ಶುಶ್ರೂಷಕರು ದೇವರ ಸಮಾನ. ಅವರ ಉಪಚಾರ ನಮ್ಮನ್ನು ಬದುಕಿಸಿತು ಎಂದು ನಿಟ್ಟುಸಿರುಬಿಟ್ಟರು. 37 ವರ್ಷದ ಈ ವ್ಯಕ್ತಿಯ 27 ವರ್ಷದ ಸಹೋದರ ಕೆಲ ದಿನಗಳ ಹಿಂದೆ ಗುಣಮುಖನಾಗಿ ಬಿಡುಗಡೆಗೊಂಡಿದ್ದಾನೆ. ಅದಾದ ನಂತರ ಇಬ್ಬರು ಮಕ್ಕಳು ಬಿಡುಗಡೆಗೊಂಡಿದ್ದರು. 37 ವರ್ಷದ ವ್ಯಕ್ತಿ ಹಾಗೂ ಇನ್ನೊಂದು ಮಗು ಭಾನುವಾರ ರಾತ್ರಿ ಬಿಡುಗಡೆಗೊಂಡಿದ್ದಾರೆ. ಈತನ 30 ವರ್ಷದ ಸಹೋದರಿ ಮತ್ತು ಹಿರಿಯ ಸಹೋದರಿಯ ಮಗಳು (13 ವರ್ಷ) ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ.