ಸುರಪುರ ತಾಲೂಕಿನ ಚಿಕ್ಕನಹಳ್ಳಿಯಲ್ಲಿ ಸೋಮವಾರ ಕೊಳವೆಬಾವಿ ನೀರು ಸೇವಿಸಿ ಅಸ್ವಸ್ಥರಾಗಿ ಸರ್ಕಾರಿ ಶಾಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಆರೋಗ್ಯವನ್ನು ಸೋಮವಾರ ಶಾಸಕ ರಾಜಾ ವೆಂಕಟಪ್ಪ ನಾಯಕ ವಿಚಾರಿಸಿದರು. ಬಸವರಾಜ ಸಜ್ಜನ್, ಡಾ.ಆರ್.ವಿ.ನಾಯಕ, ನಿಂಗರಾಜ ಬಾಚಿಮಟ್ಟಿ ಇತರರಿದ್ದರು. 
ಜಿಲ್ಲೆ

ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿ

ಸುರಪುರ: ಕೊಳವೆಬಾವಿ ನೀರು ಸೇವಿಸಿ ಅಸ್ವಸ್ಥರಾದ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಇರಿಸುವಂತೆ ಶಾಸಕ ರಾಜಾ ವೆಂಕಟಪ್ಪ ನಾಯಕ ತಾಲೂಕು ಆರೋಗ್ಯಾಧಿಕಾರಿಗೆ ತಾಕೀತು ಮಾಡಿದರು.

ಚಿಕ್ಕನಹಳ್ಳಿಯಲ್ಲಿ ಸೋಮವಾರ ಕೊಳವೆಬಾವಿ ನೀರು ಸೇವಿಸಿ ೨೫ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡು ಸರ್ಕಾರಿ ಶಾಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ಅರಿತು ಸ್ಥಳಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಅವರು, ಮಕ್ಕಳ ಚಿಕಿತ್ಸೆಗಾಗಿ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಯಾರೊಬ್ಬರೂ ಭಯಪಡುವ ಅಗತ್ಯವಿಲ್ಲ. ಕೂಡಲೇ ಚೇತರಿಸಿಕೊಳ್ಳುವಂತೆ ಚಿಕಿತ್ಸೆ ನೀಡಬೇಕು. ಊರಲ್ಲಿ ಆರೋಗ್ಯ ಸಿಬ್ಬಂದಿ ಮೊಕ್ಕಾಂ ಹೂಡುವಂತೆ ಸೂಚಿಸಲಾಗಿದೆ ಎಂದರು.

ತಾಪಂ ಇಒ ಬಸವರಾಜ ಸಜ್ಜನ್, ಟಿಎಚ್‌ಒ ಡಾ.ಆರ್.ವಿ. ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಮಲ್ಲಣ್ಣ ಸಾಹುಕಾರ ಮುಧೋಳ ಇತರರಿದ್ದರು.

ಗ್ರಾಮಸ್ಥರ ಆಕ್ರೋಶ: ೨೫ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಲು ಕೊಳವೆಬಾವಿಯ ಕಲುಷಿತ ನೀರು ಸೇವನೆಯೇ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ಊರಲ್ಲಿ ಶುದ್ಧ ಕುಡಿವ ನೀರಿನ ಸೌಲಭ್ಯ ಇಲ್ಲದಿರುವುದಕ್ಕೆ ಈ ಘಟನೆ ಸಾಕ್ಷಿ ಎಂದು ದೂರಿದರು.

ತಾಲೂಕು ವೈದ್ಯಾಧಿಕಾರಿ ಭೇಟಿ
ವಿಷಯ ಅರಿಯುತ್ತಲೇ ತಾಲೂಕು ವೈದ್ಯಾಧಿಕಾರಿ ಡಾ.ಆರ್.ವಿ. ನಾಯಕ ಗ್ರಾಮಕ್ಕೆ ಭೇಟಿ ನೀಡಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿದರು. ಪ್ರತಿಯೊಬ್ಬರೂ ನೀರು ಕಾಯಿಸಿ ಆರಿಸಿ ಸೇವಿಸಬೇಕು. ಈ ಕುರಿತು ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿ ಮೂಡಿಸಬೇಕು. ಈಗಾಗಲೇ ಮಕ್ಕಳು ಸೇವಿಸಿದ ಕೊಳವೆ ಬಾವಿ ನೀರು ಲ್ಯಾಬ್‌ಗೆ ಕಳಿಸಿದ್ದು, ವರದಿ ಬರವವರೆಗೆ ಯಾರೂ ಕೊಳವೆಬಾವಿ ನೀರು ಬಳಸಬಾರದು ಎಂದು ಕೋರಿದರು. ಮುನ್ನೆಚ್ಚರಿಕೆಯಾಗಿ ಪೇಠಅಮ್ಮಾಪುರ ವ್ಯಾಪ್ತಿಯ ವೈದ್ಯರು, ಸ್ಟಾಫ್​ ನರ್ಸ್, ಸಮುದಾಯ ಆರೋಗ್ಯ ಅಧಿಕಾರಿ ಸೇರಿ ೨೦ ಸಿಬ್ಬಂದಿ ಆಂಬುಲೆನ್ಸ್ ಜತೆ ಊರಲ್ಲಿ ಬಿಡಾರ ಹೂಡಿದ್ದಾರೆ.