ರಾವಂದೂರು: ಮಕ್ಕಳಿಗೆ ಸಿರಿಧಾನ್ಯಗಳ ಅರಿವಿನ ಅಗತ್ಯತೆ ಇದೆ ಎಂದು ಉಪ ತಹಸೀಲ್ದಾರ್ ಕೆ. ಶುಭಾ ತಿಳಿಸಿದರು.
ಪಿರಿಯಾ ಪಟ್ಟಣ ತಾಲೂಕು ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಏರ್ಪಡಿಸಲಾಗಿದ್ದ ಸಿರಿಧಾನ್ಯ ಮೇಳದಲ್ಲಿ ಭಾಗವಹಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳು ರುಚಿಗೋಸ್ಕರ ಜಂಕ್‌ಫುಡ್‌ಗಳನ್ನು ಸೇವಿಸುವುದರಿಂದ ಚಿಕ್ಕವಯಸ್ಸಿನಲ್ಲೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹಾಗಾಗಿ ಇಂತಹ ಸಿರಿಧಾನ್ಯ ಮೇಳಗಳಂತಹ ಕಾರ್ಯಕ್ರಮಗಳು ಮಕ್ಕಳಿಗೆ ಅತ್ಯವಶ್ಯಕವಾಗಿದ್ದು, ಸಿರಿಧಾನ್ಯಗಳ ಬಳಕೆಯಿಂದ ಮಕ್ಕಳ ಆರೋಗ್ಯ ವೃದ್ಧಿಸುವುದರ ಜತೆಗೆ ಮಕ್ಕಳ ಜ್ಞಾಪಕ ಶಕ್ತಿಯೂ ಹೆಚ್ಚಾಗುತ್ತದೆ. ರಾಜ್ಯ ಸರ್ಕಾರವು ಸಿರಿಧಾನ್ಯಗಳ ಬಗ್ಗೆ ಹೆಚ್ಚು ಜಾಗೃತಿಯನ್ನು ಮೂಡಿಸುತ್ತಿದ್ದು, ಪಾಲಕರು ಇಂತಹ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಿಆರ್‌ಪಿ ಸೋಮಶೇಖರ್ ಮಾತನಾಡಿ, ಮಾನವನ ದೇಹಕ್ಕೆ ಸಮತೋಲನ ಆಹಾರದ ಅಗತ್ಯವಿದ್ದು, ಮಕ್ಕಳಿಗೆ ತರಕಾರಿ, ಧಾನ್ಯಗಳು, ಹಣ್ಣುಗಳ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಇದಾಗಿದ್ದು, ಮಕ್ಕಳು ಜಂಕ್‌ಫುಡ್‌ಗಳತ್ತ ಆಕರ್ಷಿತರಾಗಿ ಅನಾರೋಗ್ಯಕ್ಕೀಡಾಗದಂತೆ ತಡೆಯಲು ಪಾಲಕರು ಕಾಳಜಿ ವಹಿಸಬೇಕಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಡಿ .ಎಸ್.ನಂದೀಶ್, ಮುಖ್ಯೋಪಾಧ್ಯಾಯನಿ ಲಿಲ್ಲಿ ಮೇರಿ, ಎಸ್‌ಡಿಎಂಸಿ ಸದಸ್ಯರಾದ ಜಲೇಂದ್ರ, ರಾಜೇಂದ್ರ, ಹುಚ್ಚೇಗೌಡ, ತೇಜಸ್ವಿನಿ, ಶ್ರೀನಿವಾಸ್, ಕಮಲ, ದಿನೇಶ ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಹಾಗೂ ಪಾಲಕರು ಹಾಜರಿದ್ದರು.