ಮದ್ದೂರು: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸ್ವಾಭಾವಿಕ ಜ್ಞಾನ ಮತ್ತು ಧೈರ್ಯ ಇರುತ್ತದೆ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಶಿವಪುರ ಪೂರ್ಣಪ್ರಜ್ಞ ಶಾಲೆಯ 25ನೇ ವರ್ಷದ ರಜತ ಮಹೋತ್ಸವ, ಶಾಲಾ ಸಾಂಸ್ಕೃತಿಕ ಸಂಭ್ರಮದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಓದಿದಂತಹ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪಾಲಕರು ತಮ್ಮ ಮಕ್ಕಳಿಗೆ ಜೀವನದಲ್ಲಿ ಕಷ್ಟವಾಗಬಾರದು ಎಂಬ ಉದ್ದೇಶದಿಂದ ಹಣ, ಆಸ್ತಿ, ಐಶ್ವರ್ಯವನ್ನು ಸಂಪಾದನೆ ಮಾಡುತ್ತಾರೆ. ಇದರ ಬದಲಿಗೆ ಮಕ್ಕಳನ್ನೇ ಆಸ್ತಿಯನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪಾಲಕರಿಂದ, ಶಿಕ್ಷಕರಿಂದ ಹಾಗೂ ವ್ಯವಸ್ಥೆಯಿಂದ ಒತ್ತಡ ಜಾಸ್ತಿಯಾಗುತ್ತಿದ್ದು, ಒತ್ತಡ ಕಡಿಮೆ ಮಾಡಬೇಕು ಎಂದರು.
ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿ, ಶಿಕ್ಷಣ ಜ್ಞಾನದ ಕಣ್ಣು ಇಂತಹ ಶಿಕ್ಷಣವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಕಠಿಣ ಪರಿಶ್ರಮಪಟ್ಟು ಪಡೆದುಕೊಂಡರೆ ಪ್ರತಿಯೊಬ್ಬರು ಉತ್ತಮ ಪ್ರಜೆಯಾಗುವ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಮಧು ಜಿ. ಮಾದೇಗೌಡ, ಮರಿತಿಬ್ಬೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಪೂರ್ಣಪ್ರಜ್ಞಾ ಶಾಲೆಯ ಅಧ್ಯಕ್ಷೆ ಪಿ.ಕಸ್ತೂರಿ, ಕಾರ್ಯದರ್ಶಿ ಅನಂತೇಗೌಡ, ಬೆಂಗಳೂರು ಬಿಡಬ್ಲೂೃಎಸ್‌ಎಸ್ (ಕಾವೇರಿ) ಮುಖ್ಯ ಇಂಜಿನಿಯರ್ ಎಸ್.ವಿ.ರಮೇಶ್, ಲೋಕಾಯುಕ್ತ ಇಲಾಖೆಯ ಡೆಪ್ಯೂಟಿ ರಿಜಿಸ್ಟ್ರಾರ್ ಎಂ.ಸುರೇಶ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಎಸ್.ಟಿ.ಜವರೇಗೌಡ, ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕ ಸೋಮಶೇಖರಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಚ್.ಕಾಳೀರಯ್ಯ, ಬಿ.ಎನ್.ಮರಿಗೌಡ, ಎಸ್.ಎಸ್.ಕೆ. ಸಂಯೋಜನ ಸಮನ್ವಯಾಧಿಕಾರಿ ಎಂ.ರೇಣುಕಮ್ಮ, ಡಯಟ್ ಹಿರಿಯ ಉಪನ್ಯಾಸಕ ಮಹದೇವ, ನಿವೃತ್ತ ಪ್ರಾಂಶುಪಾಲರಾದ ಕೆ.ಕಾಂತರಾಜು, ಡಾ.ಬಿ.ಕೃಷ್ಣ, ಪುರಸಭಾ ಅಧ್ಯಕ್ಷ ಸುರೇಶ್‌ಕುಮಾರ್, ಉಪನ್ಯಾಸಕ ರಾಜೇಂದ್ರ ಇದ್ದರು.