ಮಂಡ್ಯ : ಭಾರತ ಸಾಂಸ್ಕೃತಿಕವಾಗಿ ಶ್ರೀಮಂತ ದೇಶವಾಗಿದ್ದು, ಇಲ್ಲಿನ ಸಂಸ್ಕೃತಿ, ಪರಂಪರೆಗೆ ವಿಶ್ವಮಟ್ಟದಲ್ಲಿ ಹೆಚ್ಚಿನ ಮನ್ನಣೆ ಇದೆ ಎಂದು ಭಾರತ್ ವಿಕಾಸ್ ಪರಿಷತ್‌ನ ಮಹಾ ಪೋಷಕ ಟಿ.ಪಿ.ಚೌಡಯ್ಯ ಹೇಳಿದರು.
ಕೆ.ಎಂ.ದೊಡ್ಡಿ ಸಮೀಪದ ಚಿಕ್ಕರಸಿನಕೆರೆಯ ಶ್ರೀ ಕಾಲಭೈರವೇಶ್ವರ ಪುಣ್ಯ ಕ್ಷೇತ್ರದಲ್ಲಿ ಶ್ರೀ ಕಾಲಭೈರವೇಶ್ವರ ಸಮುದಾಯ ಭವನದಲ್ಲಿ ಭಾರತ್ ವಿಕಾಸ್ ಪರಿಷತ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟೀಯ ಸಮೂಹ ಗಾಯನ ಸ್ಪರ್ಧೆ ಮತ್ತು ಭಾರತವನ್ನು ಅರಿಯಿರಿ ರಸ ಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ಫಲಾಪೇಕ್ಷೆ ಇಲ್ಲದೆ ಹಾಗೂ ಸ್ವಾರ್ಥರಹಿತ ಸೇವೆ ಮಾಡುವುದನ್ನು ರೂಢಿಸಿಕೊಳ್ಳಬೇಕು. ಮಕ್ಕಳಿಗೆ ಸಂಸ್ಕೃತಿ ಪರಿಚಯಿಸುವ ಕಾರ್ಯವಾಗಬೇಕು. ಸಂಘಟನೆ ಜತೆಗೆ ಸೇವೆ ಗುರಿ ಇಟ್ಟುಕೊಂಡು ಕೆಲಸ ಮಾಡಬೇಕು. ದೇಶದ ಏಕತೆ ಮತ್ತು ಸಮಗ್ರತೆಗೆ ಪೂರಕ ಕಾರ್ಯಕ್ರಮ ರೂಪಿಸಿ ಯುವಕರನ್ನು ಜಾಗೃತಿಗೊಳಿಸಬೇಕಾಗಿದೆ ಎಂದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷ ಶಿವಮಾದೇಗೌಡ ವಹಿಸಿದ್ದರು. ಸ್ನೇಹ ವಿದ್ಯಾ ಸಂಸ್ಥೆಯ ಅಧ್ಯಕ್ಷ ದಾಸೇಗೌಡ, ಭಾರತ್ ವಿಕಾಸ್ ಪರಿಷತ್ ನ ಮೈಸೂರು ಪ್ರಾಂತದ ಉಪಾಧ್ಯಕ್ಷ ಎಂ.ಮಾಯಪ್ಪ, ಕಾಲಭೈರವೇಶ್ವರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಯಜಮಾನ್ ಶಿವಲಿಂಗೇಗೌಡ, ಚಿಕ್ಕರಸಿನಕೆರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಂಜುಳಾ, ಜಾನಪದ ಗಾಯಕ ಹುರುಗಲವಾಡಿ ರಾಮಯ್ಯ, ಭಾರತೀಕಾಲೇಜಿನ ಉಪನ್ಯಾಸಕಿ ಎ.ಸಿ.ಮಾನಸಾ, ತಳಗವಾದಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಡಿ.ಎಂ.ಪವಿತ್ರಾ, ಶೆಟ್ಟಹಳ್ಳಿ ರವಿಕುಮಾರ್ ಸೇರಿದಂತೆ ಇತರರಿದ್ದರು.