ಜಿಲ್ಲೆ

ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿ : ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿ ಕರೆ

ಬಿಡದಿ: ಮಕ್ಕಳಿಗೆ ಶಾಲೆಯಲ್ಲಿ ನೀಡುವ ಪಠ್ಯ ಶಿಕ್ಷಣದ ಜತೆಗೆ ಮನೆಯಲ್ಲಿ ಪಾಲಕರು ನೀಡುವ ಸಂಸ್ಕಾರದ ಶಿಕ್ಷಣವೂ ಮುಖ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ಡಾ. ನಿರ್ಮಲಾನಂದ ಸ್ವಾಮಿ ಅಭಿಪ್ರಾಯಪಟ್ಟರು.

ಹೋಬಳಿಯ ಬಾನಂದೂರು ಬಿಜಿಎಸ್ ಶಾಲೆಯ ಜ್ಞಾನಜ್ಯೋತಿ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಕ್ಷರಭ್ಯಾಸ ಮತ್ತು ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳು ದೇಶದ ಆಸ್ತಿಯಾಗಿದ್ದು ಅವರ ಭವಿಷ್ಯ ರೂಪಿಸುವ ಆಸೆ ಎಲ್ಲ ಪಾಲಕರಿಗಿರುತ್ತದೆ. ಅದಕ್ಕೆ ಪೂರಕವಾಗಿ ಆಧುನಿಕ ಜಗತ್ತಿನ ಪ್ರವೇಶಕ್ಕೆ ಮಕ್ಕಳನ್ನು ಪ್ರಾಥಮಿಕ ಹಂತದಲ್ಲಿಯೇ ಅಣಿಗೊಳಿಸುವುದು ಶ್ರೀಮಠದ ಉದ್ದೇಶವಾಗಿದೆ. ಹುಟ್ಟಿದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕಿದೆ. ಅವರ ಸಮಸ್ಯೆಗಳಿಗೆ ಅವರೇ ಪರಿಹಾರ ಕಂಡುಕೊಳ್ಳುವ ರೀತಿ ತರಬೇತಿ ನೀಡುವಂತೆ ಪಾಲಕರಿಗೆ ಕಿವಿಮಾತು ಹೇಳಿದರು.

ಮಕ್ಕಳು ಆರಂಭದಲ್ಲಿ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಪಾಲಕರು ಮಾತನಾಡಿದ ಸಕಾರಾತ್ಮಕ ಹಾಗೂ ನಕಾರಾತ್ಮಕ ಮಾತುಗಳು, ಕಣ್ಣಿನಿಂದ ನೋಡಿದ ವಿಷಯಗಳು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಪಾಲಕರು ಮಕ್ಕಳ ಮುಂದೆ ಎಚ್ಚರದಿಂದ ಮಾತನಾಡಬೇಕು. ಬುದ್ದಿ ಹೊಂದಿರುವ ಮನುಷ್ಯ ಕೆಲವೊಮ್ಮೆ ಜ್ಞಾನವಿದ್ದರೂ ಪಶುವಂತೆ ವರ್ತಿಸುತ್ತಾನೆ. ಇದು ಸಮಾಜದಲ್ಲಿ ಬದಲಾಗಬೇಕು. ದೇಹದ ಒಳಗಿನ ಆತ್ಮ ವಿದ್ಯೆ ಕಲಿಯುವಂತಾಗಬೇಕು ಎಂದರು.

ಚಿಕ್ಕಬಳ್ಳಾಪುರ ಶಾಖಾ ಮಠದ ಆಡಳಿತಾಧಿಕಾರಿ ಶಿವರಾಮರೆಡ್ಡಿ ಮಾತನಾಡಿ, ಬಿಜಿಎಸ್‌ನ 500 ಶಿಕ್ಷಣ ಕೇಂದ್ರಗಳಲ್ಲಿ ಈ ಶಾಲೆಗೆ ವಿಶೇಷ ಸ್ಥಾನವಿದ್ದು, ಅಕ್ಷರ ದಾಸೋಹದಡಿ ಸಂಸ್ಕಾರಯುತ ಶಿಕ್ಷಣ ನೀಡುವ ಕಾರ್ಯ ಮಾಡುತ್ತಿದೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ ಗ್ರಾಮೀಣ ಮಕ್ಕಳು ಉನ್ನತ ಸ್ಥಾನದಲ್ಲಿ ಹೆಸರು ಗಳಿಸಿದ್ದಾರೆ ಎಂದರು. ಅಕ್ಕಪಕ್ಕದ ಗ್ರಾಮದಿಂದ ಆಗಮಿಸಿದ್ದ ಮಕ್ಕಳಿಗೆ ಶ್ರೀಗಳು ಅಕ್ಷರಾಭ್ಯಾಸ ಮಾಡಿಸಿದರು.

ಧಾರ್ಮಿಕ ಪರಂಪರೆ ಕೇಂದ್ರ: ಬಾನಂದೂರು ಗ್ರಾಮದ ಜನರ ಕನಸು ನನಸು ಮಾಡುವ ದಿನಗಳು ಸಮೀಪದಲ್ಲಿವೆ. ಗ್ರಾಮೀಣ ಶೈಲಿಯ ಮೂಲ ಸಂಸ್ಕೃತಿಗೆ ಧಕ್ಕೆಯಾಗದಂತೆ ಗ್ರಾಮದ ಅಭಿವೃದ್ಧಿಯಾಗಲಿದೆ. ಜತೆಗೆೆ ವಿಶ್ವ ಪಾರಂಪರಿಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯ ಗತ ವೈಭವ ಮರುಕಳಿಸುವ ಕೇಂದ್ರವಾಗಿ ರೂಪಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಬಾನಂದೂರು ಶಾಖಾ ಮಠದ ಶ್ರೀಮನಸ್ವಿನಾಥ ಸ್ವಾಮಿ, ನಿವೃತ್ತ ಪ್ರಾಧ್ಯಾಪಕ ಚಂದ್ರಶೇಖರ್, ಬಾನಂದೂರು ಬಿಜಿಎಸ್ ಪ್ರಗತಿಪರ ವೇದಿಕೆ ಅಧ್ಯಕ್ಷ ಮರಿಸ್ವಾಮಿ, ಕಾರ್ಯದರ್ಶಿ ಬಿ.ಎನ್. ಗಂಗಾಧರಯ್ಯ, ಪುರಸಭೆ ಸದಸ್ಯರಾದ ಸಿ. ಉಮೇಶ್, ಹೊಂಬಯ್ಯ, ಶ್ರೀನಿವಾಸ್, ಸಮಾಜ ಸೇವಕ ಚಿಕ್ಕಣ್ಣಯ್ಯ, ಮುಖ್ಯಶಿಕ್ಷಕ ದೊಡ್ಡವೀರೇಗೌಡ ಇತರರು ಇದ್ದರು.