ಹಾಸನ: ಮಕ್ಕಳನ್ನು ಕೇವಲ ಪಠ್ಯಗಳಿಗೆ ಮಾತ್ರ ಸೀಮಿತಗೊಳಿಸದೆ ಪ್ರತಿನಿತ್ಯ ಕೆಲ ಸಮಯ ಸಂಸ್ಕಾರ ಮತ್ತು ಸಂಸ್ಕೃತಿಯ ಪಾಠ ಕಲಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್. ಮಂಜುಳಾ ಅವರು ಶಿಕ್ಷಕರಿಗೆ ಸಲಹೆ ನೀಡಿದರು.
ನಗರದ ಹೊಸಲೈನ್ ರಸ್ತೆ ಬಳಿ ಇರುವ ಶ್ರೀಮತಿ ರಾಜಮ್ಮ ಚನ್ನವೀರಪ್ಪ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಭಾರತ್ ಸೇವಾದಳದಿಂದ ಮಂಗಳವಾರ ಹಮ್ಮಿಕೊಂಡಿದ್ದ ಜಿಪಿಟಿ ಶಿಕ್ಷಕ, ಶಿಕ್ಷಕಿಯರ ಸಹಾಯಕ ಶಿಕ್ಷಣ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೇವಾದಳ ಎನ್ನುವ ಹೆಸರಲ್ಲೇ ಸೇವೆ ಇದೆ. ನಮ್ಮ ಪೂರ್ವಿಕರು ತುಂಬಾ ಹೋರಾಟ ಮಾಡಿ ನಮಗೆ ಸ್ವಾತಂತ್ರೃ ಕೊಟ್ಟಿದ್ದಾರೆ. ಇಂದು ನಮಗೆ ಎಲ್ಲ ವ್ಯವಸ್ಥೆಗಳು, ಹಕ್ಕುಗಳು, ಅವಕಾಶಗಳು ಸಿಗುತ್ತಿವೆ. ಆದರೆ, ಇಂದಿನ ಸಮಾಜ ಹೋಗುತ್ತಿರುವ ದಾರಿ ನೋಡಿದರೆ ಭಯವಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ವಯಸ್ಸಿನ ಮಕ್ಕಳು ಹಲವು ದುಶ್ಚಟಗಳ ಕಡೆಗೆ ವಾಲುತ್ತಿದ್ದಾರೆ. ಮದ್ಯ ಸೇವನೆ, ಗಾಂಜಾ ಸೇವನೆ, ಮಾದಕ ವಸ್ತು ಸೇವನೆ ಸೇರಿದಂತೆ ನಶೆ ಪದಾರ್ಥಗಳನ್ನು ಬಳಕೆ ಮಾಡುತ್ತಿದ್ದಾರೆ. ಹದಿಹರೆಯದ ವಯಸ್ಸಿನಲ್ಲಿ ಪ್ರೀತಿ ಎಂಬ ಆಕರ್ಷಣೆ ಒಳಗಾಗುತ್ತಿದ್ದಾರೆ. ಹಿರಿಯರಿಗೆ ಗೌರವ ಕೊಡುವುದನ್ನು ಮರೆಯುತ್ತಿದ್ದಾರೆ. ಇದಕ್ಕೆ ಮುಖ್ಯವಾದ ಕಾರಣ ಸಂಸ್ಕಾರದ ಕೊರತೆ. ಈ ಸಂಸ್ಕಾರವನ್ನು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಮನೆಯಲ್ಲಿ ಪೋಷಕರು ಹಾಗೂ ಶಾಲೆಯಲ್ಲಿ ಶಿಕ್ಷಕರು ಕಲಿಸಿಕೊಡಬೇಕು ಎಂದು ಹೇಳಿದರು.
ಪೋಷಕರು ನನ್ನ ಮಗ-ಮಗಳು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಗಮನ ಕೊಡುತ್ತಿಲ್ಲ. ತರಗತಿಯಲ್ಲಿ ಅತ್ಯುತ್ತಮ ಅಂಕ ತೆಗೆದರೆ ನಿನಗೆ ಬೆಲೆ ಬಾಳುವ ವಸ್ತುಗಳನ್ನು ಕೊಡಿಸುವ ಆಮಿಷಗಳನ್ನು ಒಡ್ಡುವ ಮೂಲಕ ಮಕ್ಕಳನ್ನು ಅಂಕಗಳ ಹಿಂದೆ ಬೀಳುವಂತೆ ಮಾಡುತ್ತಿದ್ದಾರೆ. ಹದಿಹರೆಯದ ವಯಸ್ಸಿನ ಮಕ್ಕಳಲ್ಲಿ ವಾಸ್ತವದ ಸೂಕ್ಷ್ಮತೆಯ ಅರಿವು ಇರುವುದಿಲ್ಲ. ಬೈಕ್ ಕೊಡಿಸಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯಲ್ಲಿ ಇದ್ದೇವೆ. ಹೀಗಾಗಿ ಮಕ್ಕಳಿಗೆ ಮನೆಯಲ್ಲಿ ಮತ್ತು ಶಾಲೆಯಲ್ಲಿ ಮುಖ್ಯವಾಗಿ ವಾಸ್ತವದ ಅರಿವು ಮೂಡಿಸಬೇಕು. ಈ ಶಿಬಿರದಲ್ಲಿ ನೀವು ಕಲಿತಿರುವುದನ್ನು ಶಾಲೆಯಲ್ಲಿ ಮಕ್ಕಳಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಭಾರತ್ ಸೇವಾದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷ ಎಂ.ಕೆ. ಕಮಲ್ ಕುಮಾರ್ ಮಾತನಾಡಿ, ಸಂಸ್ಕಾರ ಮತ್ತು ಸಂಸ್ಕೃತಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಭಾರತ್ ಸೇವಾದಳ ನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರದ ಜತೆ ಹಲವು ಸಂಘ-ಸಂಸ್ಥೆಗಳು ಕೂಡ ಕಾರ್ಯ ನಿರ್ವಹಿಸಬೇಕಾಗಿದೆ. ಭಾರತ್ ಸೇವಾದಳವು ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ರಾಷ್ಟ್ರಾಭಿಮಾನದ ಶಿಕ್ಷಣ ನೀಡುವುದರ ಜೊತೆಗೆ ರಾಷ್ಟ್ರೀಯ ಭಾವಕ್ಯತೆ, ಮೌಲ್ಯಾಧಾರಿತ, ಶಾರೀರಿಕ, ಯೋಗ ಶಿಕ್ಷಣದ ಬಗ್ಗೆಯೂ ತರಬೇತಿಯನ್ನು ತಜ್ಞರಿಂದ ಕೊಡಿಸುವ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ರಾಜ್ಯಾದ್ಯಂತ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ ಅಂಕ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಲಾಗುತ್ತಿದೆಯೇ ಹೊರತು ಸಂಸ್ಕಾರ, ಸಂಸ್ಕೃತಿ ಆಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡುವುದು ಕಡಿಮೆ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಲ್ಲಿ ಬೌದ್ಧಿಕವಾಗಿ ಮತ್ತು ದೈಹಿಕವಾಗಿ ಚೈತನ್ಯ ತುಂಬಬಹುದಾದ ಶಿಕ್ಷಣವನ್ನು ಇಂದು ಅಳವಡಿಸಿಕೊಳ್ಳಬೇಕಿದೆ. ಈ ಆರು ದಿನಗಳ ತರಬೇತಿಯಲ್ಲಿ ನೀವು ಕಲಿತ ವಿದ್ಯೆಯನ್ನು ಶಾಲೆಯಲ್ಲಿ ಮಕ್ಕಳಿಗೆ ಹೇಳಿಕೊಟ್ಟಾಗ ಈ ಶಿಬಿರ ಸಾರ್ಥಕವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಚೈತ್ರಾ ಮಂಜೇಗೌಡ, ಸಂಪನ್ಮೂಲ ವ್ಯಕ್ತಿ ಬಿ.ಎನ್. ಮಹೇಶ್, ಜಿ. ದೀಪಾ, ಎಚ್. ಮಹೇಶ್, ಭಾರತ್ ಸೇವಾದಳ ವಲಯ ಸಂಘಟಕರಾದ ವಿ.ಎಸ್. ರಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.