ಶ್ರೀರಂಗಪಟ್ಟಣ: ಜನರಿಗೆ ಸಂಸ್ಕಾರ ಕಲಿಸುವ ಜತೆಗೆ ಅವರ ಶ್ರೇಯೋಭಿವೃದ್ಧಿಗೆ ಸಾಧ್ಯವಾದಷ್ಟು ನೆರವಾದಾಗ ಮಾನವ ಜನ್ಮ ಸಾರ್ಥಕವಾಗುತ್ತದೆ ಎಂದು ಚಂದ್ರವನ ಮಠದ ಪೀಠಾಧಿಪತಿ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಹೊರವಲಯದ ಪೂರ್ವವಾಹಿನಿಯ ಆಶ್ರಮದಲ್ಲಿ ಗುರುವಾರ ಶ್ರೀಮಠದ ಭಕ್ತರೊಂದಿಗೆ ತಮ್ಮ 48ನೇ ಜನುಮ ದಿನ ಆಚರಿಸಿಕೊಂಡ ಅವರು ಬಳಿಕ ಮಾತನಾಡಿದರು.
ಯಾವುದೇ ಧರ್ಮದ ಮಕ್ಕಳಲ್ಲಿ ಬಾಲ್ಯದಿಂದಲೇ ನಮ್ಮ ಸಂಸ್ಕಾರ, ಸಂಸ್ಕೃತಿ, ಪರಂಪರೆ, ಗುರು -ಹಿರಿಯರಿಗೆ ಗೌರವ ನೀಡುವುದನ್ನು ಕಲಿಸಬೇಕು. ಜತೆಗೆ, ಮತ್ತೊಬ್ಬರ ಕಷ್ಟದಲ್ಲಿ ಭಾಗಿಯಾಗುವುದನ್ನು ಕಲಿಸಬೇಕು. ಎಲ್ಲರೂ ತಮ್ಮಿಂದಾದಷ್ಟು ಸಮಾಜಕ್ಕೆ ನೆರವಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತೆಂಡೆಕೆರೆಯ ರಂಭಾಪುರಿ ಸ್ವಾಮೀಜಿ ಹಾಗೂ ಅರಮನೆಯ ಜಪದಕಟ್ಟೆ ಸ್ವಾಮೀಜಿ, ಶಾಸಕ ಜಿ.ಟಿ.ದೇವೇಗೌಡ, ರಾಮನಗರ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ತಹಸೀಲ್ದಾರ್ ಅಶ್ವಿನಿ ಮತ್ತಿತರರು ಹಾಜರಿದ್ದರು.
ಇದಕ್ಕೂ ಮೊದಲು ಚಂದ್ರವನ ಆಶ್ರಮದ ರೋಟರಿ ಸಂಸ್ಥೆ ವತಿಯಿಂದ ಶ್ರೀರಂಗಪಟ್ಟಣ ತಾಲೂಕು ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಿಸಲಾಯಿತು.