ಜಿಲ್ಲೆ

ಮಕ್ಕಳಿಗೆ ಸಂಸ್ಕಾರ ನೀಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಈಗಿನ ಶಿಕ್ಷಣ ಪದ್ಧತಿಯಲ್ಲಿ ಪಠ್ಯದೊಂದಿಗೆ ಆಧ್ಯಾತ್ಮಿಕ ಹಾಗೂ ಮಹಾತ್ಮರ ಸಂದೇಶ ನೀಡುವ ಮಹತ್ತರ ಪಾಠಗಳನ್ನು ಮಾಡಿದರೆ ಮಕ್ಕಳು ದೇಶದ ಪ್ರಜ್ಞಾವಂತ ನಾಗರಿಕರಾಗುತ್ತಾರೆ ಎಂದು ತೆಂಕಲಗೂಡ ಬ್ರಹನ್ಮಠದ ಶ್ರೀ ಚನ್ನಸಿದೇಶ್ವರ ಸ್ವಾಮೀಜಿ ಹೇಳಿದರು.
ನಗರದ ಶ್ರೀ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರಾವಣ ಮಾಸ ಪುರಾಣ ಮಂಗಲ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಇತ್ತೀಚಿಗೆ ಮಕ್ಕಳಿಗೆ ಕೇವಲ ಶಿಕ್ಷಣಕ್ಕಷ್ಟೆ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ ಮಕ್ಕಳು ಇಲ್ಲಿ ಶಿಕ್ಷಣ ಪಡೆದು ವಿದೇಶಕ್ಕೆ ಹೋಗಿ ಕೆಲಸಕ್ಕೆ ಸೇರುತ್ತಾರೆ. ಆಗ ತಂದೆ ತಾಯಿ ಒಂಟಿ ಜೀವನ ಮಾಡುತ್ತಾರೆ ಇಲ್ಲವೆ ವೃದ್ಧಾಶ್ರಮ ಸೇರುತ್ತಾರೆ. ಮಕ್ಕಳಿಗೆ ಬಾಲ್ಯದಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರ ಸಿಗದಿರುವುದೇ ಇದಕ್ಕೆ ಕಾರಣ. ಈ ನಿಟ್ಟಿನಲ್ಲಿ ಪಾಲಕರು ಪ್ರವಚನ, ಪುರಾಣ ನಡೆಯುವ ಕಾರ್ಯಕ್ರಮಕ್ಕೆ ಮಕ್ಕಳನ್ನು ಕರೆದು ತಂದು ಧರ್ಮ ಮತ್ತು ಸಂಸ್ಕಾರದ ಅರಿವು ನೀಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀ ಸಂಗನಬಸವ ಸ್ವಾಮೀಜಿ ಮಾತನಾಡಿ, ಒಂದು ತಿಂಗಳಿಂದ ಹಾನಗಲ್ ಶ್ರೀ ಕುಮಾರ ಸ್ವಾಮೀಜಿ ಪ್ರವಚನ ಜರುಗಿದ್ದು, ಇದನ್ನು ಕೇಳುವುದಷ್ಟೆ ಅಲ್ಲ. ಅವರ ಚಿಂತನೆಗಳನ್ನು ಮನದಲ್ಲಿಟ್ಟು ಅವರು ಹಾಕಿಕೊಟ್ಟ ಮಾರ್ಗದತ್ತ ಸಾಗಬೇಕು. ಭಾರತ ದೇಶ ಸಂಸ್ಕೃತಿ, ಧರ್ಮದ ಪ್ರತೀಕವಾಗಿದ್ದು, ಮಕ್ಕಳು ಅದನ್ನು ಅರಿತು ಬಾಳಬೇಕು ಎಂದರು.
ಡಾ. ಕೆ.ಎಂ. ಗೌಡರ, ಬಿ.ಎಂ. ಸೂರಗೊಂಡ, ಟಿ.ಎಸ್.ಪಾಟೀಲ, ಸುರೇಶ ಹೆಗ್ಗೇರಿ, ಎನ್.ಬಿ. ಗೋಲಣ್ಣವರ, ಸುರೇಶ ಪಟ್ಟಣಶೆಟ್ಟಿ, ಆಡಳಿತ ಮಂಡಳಿ ಪದಾಧಿಕಾರಿಗಳು, ಇತರರು ಇದ್ದರು.