ಅಫಜಲಪುರ: ದೇಶದ ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ನೀಡುವ ಗುರುತರ ಜವಾಬ್ದಾರಿ ತಾಯಂದಿರ ಮೇಲಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾರವನ್ನು ನೀಡಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿಸಬೇಕು ಎಂದು ಶಾಸಕ ಎಂ.ವೈ.ಪಾಟೀಲ್ ಹೇಳಿದರು.
ಪಟ್ಟಣದ ಶ್ರೀ ಗುರು ಮಳೇಂದ್ರ ಮಠದಲ್ಲಿ ಜಾತ್ರೋತ್ಸವದ ನಿಮಿತ್ತ ಶುಕ್ರವಾರ ಮುತ್ತೈದೆಯರಿಗೆ ಉಡಿ ತುಂಬುವ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳನ್ನು ಸಬಲರಾಗಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡುತ್ತಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಮಠ-ಮಾನ್ಯಗಳು ನಿರಂತರವಾಗಿ ಶಿಕ್ಷಣ, ದಾಸೋಹ, ವಸತಿ ನೀಡಿ ಸಮಾಜದಲ್ಲಿ ಉತ್ತಮ ನಾಗರಿಕರನ್ನು ರೂಪಿಸಲು ಶ್ರಮಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ತಾಯಂದಿರಿಗೆ ಉಡಿ ತುಂಬುವುದರಿಂದ ಅವರ ಮಡಿಲು ತಣ್ಣಗಾದರೆ, ನಾಡು ಸಮೃದ್ಧವಾಗುತ್ತದೆ. ನಮ್ಮ ಸನಾತನ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ಪೂಜ್ಯನೀಯ ಸ್ಥಾನವಿದ್ದು, ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.
ಪ್ರಕಾಶ ಜಮಾದಾರ, ಜ್ಯೋತಿ ಅರುಣಕುಮಾರ ಪಾಟೀಲ್, ಶಿವಾನಂದ ಗಾಡಿಸಾಹುಕಾರ, ಶೈಲೇಶ ಗುಣಾರಿ, ಬಸವರಾಜ ಕಲಶೆಟ್ಟಿ, ಬಸವರಾಜ ವಾಳಿ, ಸುನೀಲಕುಮಾರ, ಶ್ರೀಶೈಲ ದೇಸಾಯಿ, ಸಿದ್ದರಾಮ ಗಣಾಚಾರಿ, ನಾಗರಾಜ ರಾಂಪೂರೆ, ಮಡಿವಾಳಯ್ಯ ಶಾಸ್ತ್ರೀ, ಯಶವಂತ ಬಡಿಗೇರ, ರಾಜು ಕಟ್ಟಸಂಗಾವಿ, ಗವಾಯಿ ಶಿವಶರಣ ಇತರರಿದ್ದರು.
ಏಳು ಜನ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.