ಸಕಲೇಶಪುರ: ಬಾಲ್ಯದಿಂದಲೇ ಮಕ್ಕಳಿಗೆ ವ್ಯವಹಾರ ಜ್ಞಾನ ಕಲಿಸಿದರೆ ಭವಿಷ್ಯ ಉಜ್ವಲವಾಗಿರಲಿದೆ ಎಂದು ಶಾಸಕ ಎಚ್.ಕೆ. ಕುಮಾರಸ್ವಾಮಿ ಹೇಳಿದರು.
ಶನಿವಾರ ಪಟ್ಟಣದ ರೋಟರಿ ಆಂಗ್ಲಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಸ್ತುಪ್ರದರ್ಶನ ಹಾಗೂ ಮಕ್ಕಳಸಂತೆ ಉದ್ಘಾಟಿಸಿ ಮಾತನಾಡಿ, ಪಠ್ಯಪುಸ್ತಕದೊಂದಿಗೆ ದೈನಂದಿನ ವ್ಯವಹಾರಗಳ ಬಗ್ಗೆ ಪೋಷಕರು ಹಾಗು ಶಿಕ್ಷಕರು ತಿಳಿಸುವ ಕೆಲಸವಾಗಬೇಕು. ಇದರಿಂದ ಮಕ್ಕಳಲ್ಲಿ ಸೃಜನಶೀಲತೆ ಸೃಷ್ಟಿಯಾಗಲಿದೆ. ಭವಿಷ್ಯದಲ್ಲಿ ಭಯಪಡುವ ಅಗತ್ಯವಿರುವುದಿಲ್ಲ. ಮಕ್ಕಳಲ್ಲಿ ವಸ್ತು ಹಾಗೂ ವಿಷಯಗಳ ಬಗ್ಗೆ ಹೆಚ್ಚಿನ ಕುತೂಹಲ ಮೂಡಿಸುವ ಕೆಲಸವಾಗಬೇಕಿದೆ. ಆಗ ಮಾತ್ರ ಶಿಕ್ಷಣಕ್ಕೆ ಅರ್ಥ ಬರಲಿದೆ. ಆದರೆ, ಇಂದು ಬಹುತೇಕ ಶಾಲೆಗಳಲ್ಲಿ ಪಠ್ಯದ ಹೊರತು ಅನ್ಯ ವಿಷಯಗಳ ಬಗ್ಗೆ ಅರಿವು ಮೂಡಿಸುವ ಕೆಲಸವೇ ಅಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಡಾ.ಮೋಹನ್‌ದಾಸ್ ಶೆಟ್ಟಿ ಮಾತನಾಡಿದರು. ಶಾಲಾ ವಸ್ತುಪ್ರದರ್ಶನದಲ್ಲಿ ಒಂದರಿಂದ ನಾಲ್ಕನೇ ತರಗತಿ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದ ಗಣಿತ, ವಿಜ್ಞಾನ, ಸಮಾಜಶಾಸ್ತ್ರ ಮಾದರಿಗಳನ್ನು ಪ್ರದರ್ಶಿಸಲಾಯಿತು. ಮಕ್ಕಳ ಸಂತೆಯಲ್ಲಿ ನಾಲ್ಕನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಸಿದ್ಧಪಡಿಸಿದ ಹಲವು ತರಹದ ತಿಂಡಿ ತಿನಿಸು, ತರಕಾರಿ ವ್ಯಾಪಾರಗಳು ನಡೆದವು.
ಈ ಸಂದರ್ಭದಲ್ಲಿ ಶಾಲೆಯ ಕಾರ್ಯದರ್ಶಿ ಎಚ್.ಆರ್ ಸುರೇಶ್,ರೋಟರಿ ಕ್ಲಬ್ ಅಧ್ಯಕ್ಷ ಸಹನಾ ಶಶಿಧರ್, ಪ್ರಾಂಶುಪಾಲೆ ಸುಮಂತ ಭಾರ್ಗವ್, ಮುಖ್ಯಶಿಕ್ಷಕ ರುದ್ರೇಶ್ ಮುಂತಾದವರಿದ್ದರು.