ಜಿಲ್ಲೆ

ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕಾರ ಕಲಿಸಿ

ಮೈಸೂರು: ಮೊಬೈಲ್‌ನಲ್ಲಿ ಕಳೆದು ಹೋಗಿರುವ ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕಾರವನ್ನೂ ಕಲಿಸಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.

ಆದರ್ಶ ಸೇವಾ ಸಂಘ ವತಿಯಿಂದ ಲಕ್ಷ್ಮೀಪುರಂನ ಗೋಪಾಲಸ್ವಾಮಿ ಶಿಶುವಿಹಾರ ಶಾಲೆಯಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಮುಖ್ಯವಾಗಿದೆ. ಇದರಿಂದ ಉತ್ತಮ ಸಮಾಜ ಕಟ್ಟಲು ಸಾಧ್ಯವಾಗುತ್ತದೆ ಎಂದರು. ಆದರ್ಶ ಚೈತನ್ಯ ರತ್ನ ಪ್ರಶಸ್ತಿಯನ್ನು ಶತಾಯುಷಿ ಶಾಮಣ್ಣ ಅವರಿಗೆ, ಆದರ್ಶ ಸೇವಾರತ್ನ ಪ್ರಶಸ್ತಿಯನ್ನು ಸಮಾಜ ಸೇವಕ ಸಿ.ಕೆ.ರಮೇಶ್ ರಾವ್, ವಕೀಲ ಓಂ ಶ್ಯಾಮ್‌ಭಟ್, ಜ್ಯೋತಿಷಿ ಶ್ರೀಧರ ಶಮಾ, ಆಯುರ್ವೇದ ವೈದ್ಯ ಡಾ.ಕೆ.ಎಸ್.ಉಮಾಶಂಕರ್, ಜಿಎಸ್‌ಎಸ್ ಯೋಗಿಕ್ ರಿಸರ್ಚ್ ಫೌಂಡೇಷನ್ ಸಂಸ್ಥಾಪಕ ಡಿ.ಶ್ರೀಹರಿ ಅವರಿಗೆ ಪ್ರದಾನ ಮಾಡಲಾಯಿತು.

ಆದರ್ಶ ಪ್ರತಿಭಾರತ್ನ ಪ್ರಶಸ್ತಿಯನ್ನು ಲಕ್ಷ್ಮೀಪುರಂ ಪೊಲೀಸ್ ಠಾಣೆ ಆರಕ್ಷಕ ವೃತ್ತ ನೀರಿಕ್ಷಕ ಎಸ್.ರವಿಶಂಕರ್, ಚಿಂತಕ ಎನ್.ವಿ.ರಮೇಶ್, ಸಾಹಿತಿ ಎಸ್.ಎಲ್.ವರಲಕ್ಷ್ಮೀ ಮಂಜುನಾಥ್, ನಂಜನಗೂಡು ನೂಪುರ ನೃತ್ಯಶಾಲೆ ನಿರ್ದೇಶಕಿ ವಿದುಷಿ ಕೆ.ಎಸ್ ಧನ್ಯಶ್ರೀ ಅವರಿಗೆ, ಆದರ್ಶ ಯುವ ಪ್ರತಿಭಾರತ್ನ ಪ್ರಶಸ್ತಿಯನ್ನು ತುಷಾರ ಎನ್.ಭಾರದ್ವಾಜ್, ಚಿತ್ರಕಲೆಗಾರ್ತಿ ಎಸ್.ಯಶಸ್ವಿನಿ ಅವರಿಗೆ, ಆದರ್ಶ ಬಾಲ ಪ್ರತಿಭಾರತ್ನ ಪ್ರಶಸ್ತಿಯನ್ನು ಕರಾಟೆಪಟು ವೇದಾಂತ್ ಎನ್.ಭಾರದ್ವಾಜ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಯಡತೊರೆ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮುರಳಿ, ಬೆಂಗಳೂರಿನ ಪ್ರಯೋಗ ಶಿಕ್ಷಣ ಸಂಶೋಧನಾ ಸಂಸ್ಥೆ ಮುಖ್ಯಸ್ಥ ಡಾ.ವಲ್ಲೀಶ್ ಎನ್.ಹೆರೂರ್, ಆದರ್ಶ ಸೇವಾ ಸಂಘದ ಅಧ್ಯಕ್ಷ ಜಿ.ಆರ್ ನಾಗರಾಜ ಇನ್ನಿತರರಿದ್ದರು.