ಸರಗೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಂದ್ರಧನುಷ್ 5.0 ಅಭಿಯಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಟಿ.ರವಿಕುಮಾರ್, ರಾಧಿಕಾ ಶ್ರೀನಾಥ್, ಉಮಾರಾಮು ಇದ್ದರು. 
ಜಿಲ್ಲೆ

ಮಕ್ಕಳಿಗೆ ವಯಸ್ಸಿಗೆ ಅನುಗುಣವಾಗಿ ಲಸಿಕೆ ಹಾಕಿಸಿ

ಸರಗೂರು: ಮಕ್ಕಳ ವಯಸ್ಸಿಗೆ ಅನುಗುಣವಾಗಿ ಪಾಲಕರು ಎಲ್ಲ ಲಸಿಕೆಗಳನ್ನು ತಪ್ಪದೆ ಹಾಕಿಸಿ, ಅವರನ್ನು ಸಂಭವನೀಯ ರೋಗಗಳಿಂದ ಮುಕ್ತಗೊಳಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಹೇಳಿದರು.

ತಾಲೂಕಿನ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಮಿಷನ್ ಇಂದ್ರಧನುಷ್ 5.0 ಅಭಿಯಾನ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಗತ್ಯವಿರುವ ರಕ್ಷಣಾ ಚುಚ್ಚುಮದ್ದಿನಿಂದ ಭಾಗಶಃ ಅಥವಾ ಪೂರ್ಣ ಪ್ರಮಾಣದಲ್ಲಿ ವಂಚಿತರಾದ ಗರ್ಭಿಣಿಯರು ಹಾಗೂ 0-5 ವರ್ಷದ ಮಕ್ಕಳನ್ನು ಗುರುತಿಸಿ ಈ ಹಂತದಲ್ಲಿ ಫಲಾನುಭವಿಗಳಿಗೆ ಪೂರ್ಣ ಮತ್ತು ಸಂಪೂರ್ಣ ರಕ್ಷಣಾ ಲಸಿಕೆ ನೀಡುವುದು ಇಂದ್ರಧನುಷ್ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.
2023-2024ನೇ ಸಾಲಿನಲ್ಲಿ ಮಿಷನ್ ಇಂದ್ರಧನುಷ್ 5.0 ಕಾರ್ಯಕ್ರಮ ಜಿಲ್ಲಾದ್ಯಂತ ಪ್ರಾರಂಭವಾಗಿದ್ದು, ಈ ಅಭಿಯಾನವನ್ನು 3 ಹಂತದಲ್ಲಿ ಅಂದರೆ 1ನೇ ಹಂತವು ಆಗಸ್ಟ್ 7ರಿಂದ 12ರವರೆಗೆ, 2ನೇ ಹಂತ ಸೆಪ್ಟೆಂಬರ್ 11ರಿಂದ 16 ರವರೆಗೆ 3ನೇ ಹಂತ ಅಕ್ಟೋಬರ್ 9ರಿಂದ 14ರವರೆಗೆ ನಡೆಯುತ್ತದೆ. ಆದುದ್ದರಿಂದ ಎಲ್ಲ ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆಯನ್ನು ಪಡೆಯಿರಿ ಎಂದು ಕೋರಿದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ರಾಮಚಂದ್ರ, ಸದಸ್ಯರಾದ ದಿವ್ಯಾ ನವೀನ್, ಕುಮಾರ್, ಸಣ್ಣ ತಾಯಮ್ಮ, ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಪಾರ್ಥಸಾರಥಿ, ಸಿಬ್ಬಂದಿ ಸರಳಾ , ರವಿರಾಜ್, ನಾಗರಾಜು, ಉಮೇಶ್ ಇತರರು ಹಾಜರಿದ್ದರು.