ಜಿಲ್ಲೆ

ಮಕ್ಕಳಿಗೆ ಲಿಂಗಪೂಜೆ-ಧ್ಯಾನ ಹೇಳಿಕೊಡಿ

ಹೂವಿನಹಡಗಲಿ: ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಸಂಸ್ಕಾರ ಹಾಗೂ ಗುರು-ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸುವುದು ಅಗತ್ಯವಾಗಿದೆ ಎಂದು ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

ಪಟ್ಟಣದ ಪಂಚಮಸಾಲಿ ಭವನದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ನೌಕರರ ಸಂಘದಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಸಭೆ- ಸಮಾರಂಭಗಳಲ್ಲಿನ ಭಾಷಣಕ್ಕಿಂತ ನಮ್ಮ ಮಕ್ಕಳಿಗೆ ಲಿಂಗಪೂಜೆ, ಧ್ಯಾನ ಹೇಳಿಕೊಡಬೇಕು. ಸ್ಪರ್ಧಾತ್ಮಕ ಯುಗವಾಗಿರುವುದರಿಂದ ನಿರಂತರ ಕಲಿಕೆ ಹಾಗೂ ಕಠಿಣ ಪ್ರಯತ್ನ ಅಗತ್ಯ. ನಮ್ಮ ಮನಸ್ಸು ಗಟ್ಟಿಗೊಂಡಾಗ ಸಮುದಾಯದ ಸಂಘಟನೆ ಗಟ್ಟಿಗೊಳ್ಳುತ್ತದೆ. ಸಮುದಾಯದ ಹಿರಿಯರು ಭೇದ ಮರೆತು ಸಂಘಟನೆಗೆ ಮುಂದಾಗಬೇಕು ಎಂದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಅಧ್ಯಕ್ಷ ಸೋಮನಗೌಡ ಪಾಟೀಲ್ ಮಾತನಾಡಿ, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಿಕೊಡುವಲ್ಲಿ ಮೂರು ಪಕ್ಷಗಳು ಸಹ ನ್ಯಾಯ ಮಾಡಿವೆ. ಕೆಲ ನಾಯಕರು ಪಿತೂರಿ ನಡೆಸಿದ ಕಾರಣಕ್ಕೆ ಈ ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದರು.

ಗವಿಮಠದ ಹಿರಿಶಾಂತವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ರಾಕೇಶಯ್ಯ ರಾಮಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿ.ಬಿ.ಜಗದೀಶ, ಪಂಚಮಸಾಲಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ರವಿ ಉತ್ತಂಗಿ, ಯುವ ಘಟಕದ ಅಧ್ಯಕ್ಷ ಕಿಚಿಡಿ ಕೊಟ್ರೇಶ, ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ಪ್ರಕಾಶ ಪಾಟೀಲ್, ತಾಲೂಕು ಅಧ್ಯಕ್ಷ ಕೆ.ಎಸ್.ಶಾಂತನಗೌಡ, ಪುರಸಭೆ ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ನೌಕರರ ಸಂಘದ ಗೌರವಾಧ್ಯಕ್ಷ ಬಸೆಟ್ಟಿ ಪ್ರಕಾಶ್, ಶಿವಕುಮಾರ್, ಕೆ.ಪ್ರಕಾಶ್ ಇತರರಿದ್ದರು.