ಚಿತ್ರದುರ್ಗ: ಪಾಲಕರು ತಮ್ಮ ಮಕ್ಕಳಿಗೆ ಕಾಲಕಾಲಕ್ಕೆ ಸರಿಯಾಗಿ ಲಸಿಕೆ ಹಾಕಿಸಿ, ಮಾರಕ ರೋಗಗಳು ಬಾರದಂತೆ ರಕ್ಷಿಸಿ ಎಂದು ಚಿತ್ರದುರ್ಗ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಹೇಳಿದರು.
ಗಾಂಧಿ ನಗರದ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಲಸಿಕಾ ವಂಚಿತ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ವಿಶೇಷ ಲಸಿಕಾ ಅಭಿಯಾನದಲ್ಲಿ ಮಾತನಾಡಿದರು.
ಲಸಿಕೆಗಳು 12 ಮಾರಣಾಂತಿಕ ಕಾಯಿಲೆಗಳಿಂದ ರಕ್ಷಿಸಲಿದ್ದು, 5 ವರ್ಷದಲ್ಲಿ 7 ಬಾರಿ ತಮ್ಮ ಮಕ್ಕಳಿಗೆ ಕೇಂದ್ರದಲ್ಲಿ ಲಸಿಕೆ ಹಾಕಿಸಿ. ನೆಪ ಹೇಳಿ ಮಕ್ಕಳನ್ನು ಲಸಿಕೆಗಳಿಂದ ವಂಚಿತರನ್ನಾಗಿ ಮಾಡಬೇಡಿ ಎಂದು ಸಲಹೆ ನೀಡಿದರು.
ಮಕ್ಕಳಿಗೆ ಕನಿಷ್ಠ 2 ವರ್ಷ ಎದೆ ಹಾಲುಣಿಸುವುದನ್ನು ತಪ್ಪಿಸಬೇಡಿ. ಜನನದಿಂದ ಆರು ತಿಂಗಳವರೆಗೂ ಅದನ್ನು ಬಿಟ್ಟು ಬೇರೆ ಏನನ್ನೂ ಕೊಡಬೇಡಿ. ಆನಂತರ ಅದರೊಟ್ಟಿಗೆ ಪೂರಕ ಪೌಷ್ಟಿಕ ಆಹಾರ ನೀಡಿ. ಇದರಿಂದ ಮಕ್ಕಳ ಬೆಳವಣಿಗೆ, ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಹಕಾರಿಯಾಗಲಿದೆ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಮಕ್ಕಳ ಆರೈಕೆ ಸಮಯದಲ್ಲಿ ದಂಪತಿಗಳು ಅಂತರದ ಹೆರಿಗೆ ಸೂತ್ರ ಪಾಲಿಸಿ. ಇಲಾಖೆಯಲ್ಲಿನ ಅನೇಕ ಕುಟುಂಬ ಯೋಜನೆಯ ಉಚಿತ ಸೇವೆಯನ್ನು ಪಡೆದುಕೊಳ್ಳಿ. ಸಂತಾನ ಹರಣ ಶಸ್ತ್ರಚಿಕಿತ್ಸೆಗೂ ಮುಂದಾಗಿ ಎಂದು ಸಲಹೆ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀನಿವಾಸ, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಸುಜಾತಾ, ಆಶಾ ಕಾರ್ಯಕರ್ತೆಯರಾದ ಪ್ರೇಮಾ, ರೇಣುಕಾ ಇತರರಿದ್ದರು.