ಜಿಲ್ಲೆ

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಮುಖ್ಯ

ರಾಜೀವ್​ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಡಾ.ಪುತ್ತೂರಾಯ ಹೇಳಿಕೆ

ತುಮಕೂರು: ಜೀವನದಲ್ಲಿ ಪದವಿ,ಅಂಕ ಪಡೆಯುವುದಷ್ಟೇ ಶಿಕ್ಷಣವಲ್ಲ. ನಿಜವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದೇ ಶಿಕ್ಷಣ ಎಂದು ರಾಜೀವ್​ಗಾಂಧಿ ಆರೋಗ್ಯ ವಿಜ್ಞಾನ ಗಳ ವಿಶ್ವವಿದ್ಯಾಲಯದ ವಿಶ್ರಾಂತ ನಿರ್ದೇಶಕ ಡಾ.ಕೆ.ಪಿ. ಪುತ್ತೂರಾಯ ಹೇಳಿದರು.

ವಿವಿಯ ಸರ್​ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ "ಶಿಕ್ಷಣ ಯುವಜನತೆ ಮತ್ತು ರಾಷ್ಟ್ರ ನಿರ್ಮಾಣ ವಿಷಯ ಕುರಿತ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಚಿನ್ನದ ಪದಕ ಪಡೆಯುವುದು ಮುಖ್ಯವಾದ್ದಲ್ಲ ಚಿನ್ನದಂತ ಗುಣ ಇರಬೇಕು ಎಂದರು.

ಶಿಕ್ಷಣ ವ್ಯವಸ್ಥೆಯಲ್ಲಿ ಪಾಠ ಮುಗಿದ ನಂತರ ಪರೀಕ್ಷೆ ನಡೆಸಲಾಗುತ್ತದೆ. ಆದರೆ ನಿಜ ಜೀವನದಲ್ಲಿ ಪರೀಕ್ಷೆಯಾದ ಮೇಲೆ ಪಾಠ ಕಲಿಯುತ್ತಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಧಾರಿತ ಶಿಕ್ಷಣ ಮಾತ್ರ ದೊರೆಯುತ್ತಿದ್ದು, ಮೌಲ್ಯಾಧಾರಿತ ಶಿಕ್ಷಣ ಇಲ್ಲದಂತಾಗಿದೆ. ವ್ಯಕ್ತಿತ್ವ ನಿರ್ಮಾಣಕ್ಕೆ ಯಾವುದೇ ತರಬೇತಿಯ ಅವಶ್ಯಕತೆ ಇಲ್ಲ. ಇಲ್ಲಿ ಯಾರು ನಿಷ್​ಪ್ರಯೋಜಕರಲ್ಲ, ಪರಿಪೂರ್ಣರಲ್ಲ ಎನ್ನುವ ಎರಡು ಸೂತ್ರಗಳು ತಿಳಿದಿದ್ದರೆ ಸಾಕು. ಕೊಠಡಿಯಲ್ಲಿ ಕುಳಿತು ಕಲಿಯುವ ಶಿಕ್ಷಣದ ಜತೆಗೆ ಆರೋಗ್ಯ ಶಿಕ್ಷಣ, ಆಧ್ಯಾತ್ಮ ಶಿಕ್ಷಣ ಪರಿಸರ ಶಿಕ್ಷಣ ಸಂವಹನ ಶಿಕ್ಷಣ ಕಲಿಯುವುದು ಅವಶ್ಯಕವಾಗಿದೆ ಎಂದು ತಿಳಿಸಿದರು. ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ನಮ್ಮ ದೇಶದ ಸಂಸತಿ, ಪರಂಪರೆ ಆಚಾರ- ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು. ದೇಶದ ಸಂಸತಿ, ಸಂಪತ್ತು ಎಂದರೆ ದೇಶದ ಬಹಮಹಡಿ ಕಟ್ಟಡಗಳು, ಮೆಟ್ರೋಗಳೆಲ್ಲಾ ದೇಶಾಭಿಮಾನ ತಾಯ್ನಾಡನ್ನು ಪ್ರೀತಿಸುವುದು,ಹೆತ್ತವರ ರಕ್ಷಣೆ, ರೈತ ಮತ್ತು ಸೈನಿಕರನ್ನು ಗೌರವಿಸುವುದಾಗಿದೆ. ಅದರ ಜತೆಗೆ ವಿದ್ಯಾರ್ಥಿಗಳು ಪಾಲಕರ ಕನಸನ್ನು ನನಸು ಮಾಡುವ ಜವಾಬ್ದಾರಿ ಹೊತ್ತು ಸಮಾಜ ಆಸ್ತಿ ಆಗುವುದರ ಜತೆಗೆ ದೇಶದ ಸಂಪತ್ತಾಗಬೇಕು ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಪಾವಗಡ ಶ್ರೀ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷ ಶ್ರೀ ಜಪಾನಂದಜೀ ಮಾತನಾಡಿ, ಸಂಸ್ಕಾರ ಎನ್ನುವುದು ಮನೆಯಿಂದಲೇ ಬಂದಿರಬೇಕು. ವಿದ್ಯಾರ್ಥಿಗಳಲ್ಲಿ ವಿದ್ಯೆಯ ಜತೆಗೆ ವಿನಯು ಇರಬೇಕಾಗಿದೆ ಎಂದರು. ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅಧ್ಯಕ್ಷತೆ ವಹಿಸಿದ್ದರು. ಕುಲಚಿವ ಪ್ರೊ.ಕೆ.ಪ್ರಸನ್ನಕುಮಾರ್​, ವಿವಿಯ ಪ್ರೇರಣಾ ಉಪನ್ಯಾಸ ಕಾರ್ಯ ಸಮಿತಿ ಅಧ್ಯಕ್ಷ ಪ್ರೊ.ಬಿ.ರವೀಂದ್ರಕುಮಾರ್​, ಸಂಚಾಲಕ ಡಾ.ಕೆ.ಸಿ.ಸುರೇಶ ಉಪಸ್ಥಿತರಿದ್ದರು.