ಜಿಲ್ಲೆ

ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾಲ ಬದಲಾದಂತೆ ಶೈಕ್ಷಣಿಕ ಸಿದ್ಧಾಂತಗಳು ಸಹ ಬದಲಾಗುತ್ತಿವೆ. ಹೀಗಾಗಿ ಶಿಕ್ಷಕರು ಸಹ ದಿನದಿಂದ ದಿನಕ್ಕೆ ಶಿಕ್ಷಣ ಕೌಶಲ ನವೀಕೃತಗೊಳಿಸುತ್ತ ಹೋಗಬೇಕಾಗುತ್ತದೆ. ಅಂದಾಗ ಮಾತ್ರ ನಾವು ವಿದ್ಯಾರ್ಥಿಗಳಿಗೆ ಸರಿಯಾದ ಹಾಗೂ ಮೌಲ್ಯಯುತ ಶಿಕ್ಷಣ ನೀಡಲು ಸಾಧ್ಯ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿ ಹಾಗೂ ಬೆಂಗಳೂರಿನ ರಾಷ್ಟ್ರೋತ್ಥಾನದ ಪ್ರಶಿಕ್ಷಣ ಭಾರತಿ ಆಶ್ರಯದಲ್ಲಿ ಜೆಎಸ್‌ಎಸ್ ಶಾಲೆಗಳ ಶಿಕ್ಷಕರಿಗೆ ಆಯೋಜಿಸಿದ್ದ ಒಂದು ದಿನದ ಶಿಕ್ಷಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ವ್ಯವಸ್ಥೆ ಬೆಳೆದಂತೆಲ್ಲ ಮೌಲ್ಯಯುತ ಶಿಕ್ಷಣ ಕಣ್ಣರೆಯಾಗುತ್ತಿರುವುದು ವಿಷಾದನೀಯ. ಇಂದಿನ ಶಿಕ್ಷಣದಲ್ಲಿ ಮೂಲ ಅರ್ಥಗರ್ಭಿತ ವಿಷಯ ಮರೆಮಾಚಲಾಗುತ್ತಿದ್ದು, ಇದರಿಂದ ಮಕ್ಕಳಿಗೆ ಸರಿಯಾದ ಜ್ಞಾನ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಪಠ್ಯಕ್ರಮಗಳಲ್ಲಿ ಬದಲಾವಣೆ ಮಾಡಿ ಮ್ಕಕಳಿಗೆ ನೈತಿಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶ್ರಮ ವಹಿಸಬೇಕು. ಶಿಕ್ಷಣ ನೀತಿ ಮೇಲಿಂದ ಮೇಲೆ ಬದಲಾಗಬಾರದು ಎಂದರು.
ಮಲ್ಲಿಕಾರ್ಜುನ ಚೌಕಾಶಿ ಮಾತನಾಡಿ, ಎಲ್ಲ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ಮಾರ್ಗದಿಂದ ಶಿಕ್ಷಣ ಕಲಿಸಲು ಸಾಧ್ಯವಿಲ್ಲ. ಶಿಕ್ಷಕರು ಭೋದಿಸುವ ಕ್ರಮ ಮಕ್ಕಳನ್ನು ಶಿಕ್ಷಣಕ್ಕೆ ಸೆಳೆಯುವಂತಿರಬೇಕು. ಶಿಕ್ಷಣ ಪಡೆಯುವಾಗ ಮಕ್ಕಳು ತಪ್ಪುಗಳನ್ನು ಮಾಡಿದರೆ ಅವರನ್ನು ತಿದ್ದಲು ಶಿಕ್ಷೆಗೂ ಅವಕಾಶ ಇದೆ. ಆದರೆ ಕಾಲಕ್ರಮೇಣ ಶಿಕ್ಷೆ ನೀಡುವುದು ಒಂದು ಅಪರಾಧ ಎಂದು ಪರಣಮಿಸಿದಾಗ ಶಿಕ್ಷಕರು ಮಕ್ಕಳಿಗೆ ತಮ್ಮ ಕ್ರೀಯಾಶಿಲತೆಯಿಂದಲೆ ಗಮನ ಸೆಳೆದು ಜ್ಞಾನದ ಬೀಜವನ್ನು ಅವರ ತಲೆಯಲ್ಲಿ ಬಿತ್ತಬೇಕಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಉತ್ತರ ಪ್ರಾಂತದ ರಾಷ್ಟ್ರೀಯ ಸ್ವಯಂ ಸಂಘದ ವ್ಯವಸ್ಥಾ ಪ್ರಮುಖ ಶ್ರೀನಿವಾಸ ನಾಡಗೀರ ಮಾತನಾಡಿ, ನಮ್ಮ ಭಾರತದ ಭವಿಷ್ಯ ಶಿಕ್ಷಕರ ಕೈಯ್ಯಲ್ಲಿದೆ. ನೈತಿಕ ಹಾಗೂ ಮೌಲ್ಯಯುತ ಶಿಕ್ಷಣದಿಂದ ಮಾತ್ರ ಮಕ್ಕಳನ್ನು ನಾವು ಮುಂದಿನ ಉತ್ತಮ ಪ್ರಜೆಗಳನ್ನಾಗಿ ನಾವು ಮಾಡಲು ಸಾಧ್ಯ. ಉತ್ತಮ ಶಿಕ್ಷಕರನ್ನು ರೂಪಿಸುವುದು ರಾಷ್ಟ್ರೋತ್ಥಾನ ಪರಿಷತ್ ಮೂಲ ಉದ್ದೇಶ ಎಂದರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿನಾಯಕ ಭಟ್ ಶೇಡಿಮನಿಯವರು ಪಂಚಮುಖಿ ಶಿಕ್ಷಣ ಕುರಿತು, ಡಾ. ಹರ್ಷವರ್ಧನ ಶೀಲವಂತರವರು ಭಾಷಾ ಕೌಶಲ್ಯ ಮತ್ತು ಸೃಜನಶೀಲ ಬೋಧನೆ, ಅರಳಿ ನಾಗರಾಜ ಅವರು ಸಮರ್ಥ ಶಿಕ್ಷಕರು ಕುರಿತು ಉಪನ್ಯಾಸ ನೀಡಿದರು. ಮಹೇಶ ಬಗಲಿ, ತ್ರಿವೇಣಿ ಆರ್., ಉಷಾ ಸಂತೋಷ, ಸುಧಾಮಣಿ ರಾವ್, ಮೈನಾವತಿ ದಿವಟೆ, ಇತರರು ಇದ್ದರು.
ಮಹಾವೀರ ಉಪಾಧ್ಯೆ ಸ್ವಾಗತಿಸಿದರು. ಮಹಾಂತೇಶ ಕಬಲೂರು ನಿರೂಪಿಸಿದರು. ಮಂಜುಳಾ ಯಾಳಗಿ ವಂದಿಸಿದರು.