ಮುದ್ದೇಬಿಹಾಳ ತಾಲೂಕು ಮಟ್ಟದ 3ನೇ ಶರಣ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿ ಪ್ರೊ.ಬಿ.ಎಂ.ಹಿರೇಮಠ ಉದ್ಘಾಟಿಸಿದರು. ಸರ್ವಾಧ್ಯಕ್ಷ ಚಂದ್ರಶೇಖರ ಇಟಗಿ, ಯಶವಂತ ಶರಣರು, ಶಂಕರಗೌಡ ಹಿರೇಗೌಡರ, ಸತೀಶ ಓಸ್ವಾಲ ಇತರರಿದ್ದರು. 
ಜಿಲ್ಲೆ

ಮಕ್ಕಳಿಗೆ ಬಸವ ಧರ್ಮದ ಸಂಪ್ರದಾಯ ಕಲಿಸಿ

ಮುದ್ದೇಬಿಹಾಳ: ಭವಿಷ್ಯದಲ್ಲಿ ಬಸವಧರ್ಮ ಗಟ್ಟಿಯಾಗಿ ನೆಲೆಯೂರಲು ಇಂದಿನಿಂದಲೇ ನಮ್ಮ ಮಕ್ಕಳಿಗೆ ಬಸವ ಧರ್ಮದ ಸಂಪ್ರದಾಯಗಳನ್ನು ಕಲಿಸಿಕೊಡುವ ಕೆಲಸವನ್ನು ಪಾಲಕರು ಮಾಡಬೇಕು. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಮಕ್ಕಳನ್ನು ಹೊರತರಬೇಕು ಎಂದು ಹಿರಿಯ ಸಾಹಿತಿ ಚಂದ್ರಶೇಖರ ಇಟಗಿ ಅಭಿಪ್ರಾಯಪಟ್ಟರು.

ಇಲ್ಲಿನ ಎಪಿಎಂಸಿಯಲ್ಲಿರುವ ಬ್ಯಾಂಕ್ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮುದ್ದೇಬಿಹಾಳ ತಾಲೂಕು ಮಟ್ಟದ ಮೂರನೇ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗುರು, ಪಾದೋದಕ, ಪ್ರಸಾದ, ಮಂತ್ರ, ಇಷ್ಟಲಿಂಗ, ಪಂಚಾಚಾರ, ಷಟ್‌ಸ್ಥಲ, ಕಾಯಕ, ದಾಸೋಹ, ಶಿವಯೋಗ, ಲಿಂಗಾಂಗ ಸಾಮರಸ್ಯ ಇವುಗಳ ಮಹತ್ವವನ್ನು ಮೊದಲು ನಾವು ಅರ್ಥಮಾಡಿಕೊಂಡು ನಮ್ಮ ಮಕ್ಕಳಿಗೆ ತಿಳಿಸಿಕೊಡಬೇಕು. ಭವಿಷ್ಯದಲ್ಲಿ ಬಸವ ಧರ್ಮ ಗಟ್ಟಿಯಾಗಿ ನೆಲೆಯೂರುವಂತಾಗಲು ಇದು ನೆರವಾಗುತ್ತದೆ. ಹುಟ್ಟುವ ಮಕ್ಕಳಿಗೆ ಶರಣ, ಶರಣೆಯರ ಹೆಸರಿಡುವ ಪರಿಪಾಠ ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ನಾವು ನಿಜವಾದ ಲಿಂಗಾಯತರಾಗುವುದು ಸಾಧ್ಯವಾಗುತ್ತದೆ ಎಂದರು.

ಹಿರಿಯ ಸಾಹಿತಿ ಪ್ರೊ.ಬಿ.ಎಂ.ಹಿರೇಮಠ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಬಸವೇಶ್ವರ ವಿಚಾರಗಳು, ತತ್ವ ಸಿದ್ಧಾಂತಗಳನ್ನು ಆಚರಣೆಯಲ್ಲಿ ತಂದಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಆದರೆ ಸದ್ಯ ನಾವು ಬಸವಾದಿ ಪ್ರಮಥರ ವಿಚಾರಗಳನ್ನು ಕೇವಲ ಉಪನ್ಯಾಸಗಳಿಗೆ ಬಳಸಿಕೊಂಡು ನಮ್ಮ ಒಣ ಪ್ರತಿಷ್ಠೆಯನ್ನು ಬೆಳೆಸಿಕೊಳ್ಳುತ್ತಿರುವುದು, ಬಸವೇಶ್ವರರನ್ನು ಕೇವಲ ಭಾಷಣಗಳಿಗೆ ಸೀಮಿತಗೊಳಿಸುತ್ತಿರುವುದು ವಿಷಾದನೀಯ ಎಂದರು.

ಯಶವಂತ ಶರಣರು ಸಾನ್ನಿಧ್ಯ ವಹಿಸಿದ್ದರು. ಗಣ್ಯರಾದ ಶಂಕರಗೌಡ ಹಿರೇಗೌಡರ, ಸತೀಶ ಓಸ್ವಾಲ, ಎಂ.ಬಿ.ನಾವದಗಿ, ಪಾರ್ವತಿ ಚಂದ್ರಶೇಖರ ಇಟಗಿ, ಜೋದಾಬಾಯಿ ಬೀಳಗಿ, ಪರಿಷತ್‌ನ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ, ರುದ್ರೇಶ ಕಿತ್ತೂರ ಇದ್ದರು.

ಜ್ಞಾನಭಾರತಿ ವಿದ್ಯಾಮಂದಿರ ಸೇರಿ ವಿವಿಧ ಶಾಲೆಗಳ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯರೂಪಕ ನಡೆಸಿಕೊಟ್ಟರು. ಅಶೋಕ ಮಣಿ, ಸಿದ್ದನಗೌಡ ಬಿಜ್ಜೂರ ಇತರರು ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮುನ್ನ ಸಮ್ಮೇಳನದ ಸರ್ವಾಧ್ಯಕ್ಷ ಚಂದ್ರಶೇಖರ ಇಟಗಿ ಅವರನ್ನು ಪತ್ನಿ ಪಾರ್ವತಿ ಸಮೇತ ಅಲಂಕೃತ ಸಾರೋಟಿನಲ್ಲಿ ಕುಳ್ಳಿರಿಸಿ ಅದ್ದೂರಿ ಮೆರವಣಿಗೆ ನಡೆಸಲಾಯಿತು. ಪರಿಷತ್ ಸದಸ್ಯರು ಶ್ವೇತ ವಸಧಾರಿಗಳಾಗಿ, ಕೇಸರಿ ಶಾಲು ಧರಿಸಿ ಪಾಲ್ಗೊಂಡಿದ್ದರು. ಮಾರ್ಗಮಧ್ಯೆ ಬರುವ ವೃತ್ತಗಳಲ್ಲಿನ ಮಹಾತ್ಮರಿಗೆ ಪುಷ್ಪನಮನ ಸಲ್ಲಿಸಲಾಯಿತು.

ಇದಕ್ಕೂ ಮುನ್ನ ಬೆಳಗ್ಗೆ ತಾಲೂಕು ಕುರುಬರ ಸಂಘದ ಅಧ್ಯಕ್ಷ, ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಂ.ಎನ್.ಮದರಿ ಅವರು ರಾಷ್ಟ್ರಧ್ವಜವನ್ನು, ಪರಿಷತ್ತಿನ ತಾಲೂಕು ಅಧ್ಯಕ್ಷ ಬಸವರಾಜ ನಾಲತವಾಡ ಅವರು ಪರಿಷತ್ತಿನ ಧ್ವಜವನ್ನು ಅನಾವರಣಗೊಳಿಸಿ ಸಮ್ಮೇಳನಕ್ಕೆ ಅಧಿಕೃತ ಚಾಲನೆ ನೀಡಿದರು.

ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಸಂಜೆ ಇಳಕಲ್ಲ- ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ವಿ.ಸಿ.ನಾಗಠಾಣ ಮಾತನಾಡಿದರು. ಉಪನ್ಯಾಸಕಿ ಅನ್ನಪೂರ್ಣ ಕಿತ್ತೂರ ಇದ್ದರು. ಪರಿಷತ್ತಿನ ಉಪಾಧ್ಯಕ್ಷ ಬಾಪುಗೌಡ ಪಾಟೀಲ ಆಲೂರ ಪರಿಷತ್ತಿನ ನಿರ್ಣಯಗಳನ್ನು ಮಂಡಿಸಿ ಅನುಮೋದನೆ ಪಡೆದುಕೊಂಡರು. ಸರ್ವಾಧ್ಯಕ್ಷ ಚಂದ್ರಶೇಖರ ಇಟಗಿ ಅವರನ್ನು ಪತ್ನಿ ಪಾರ್ವತಿ ಸಮೇತ ಸನ್ಮಾನಿಸಿ ಗೌರವಿಸಲಾಯಿತು.