ಬೇಲೂರು: ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಹೊರತರಲು ಪ್ರತಿಭಾ ಕಾರಂಜಿಯಂತಹ ಸ್ಪರ್ಧೆಗಳು ಸೂಕ್ತ ವೇದಿಯಾಗಿದೆ ಎಂದು ಕೆಸಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥಶೆಟ್ಟಿ ಹೇಳಿದರು.
ತಾಲೂಕಿನ ಬಿಕ್ಕೋಡು ಹೋಬಳಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗಾಗಿ ಬುಧವಾರ ಕೆಸಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿದೆ. ಮಕ್ಕಳ ಪ್ರತಿಭೆಗೆ ಪಾಲಕರು, ಶಿಕ್ಷಕರು ಹೆಚ್ಚಿನ ಪ್ರೋತ್ಸಾಹದೊಂದಿಗೆ ಸಹಕಾರ ನೀಡಬೇಕಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹಾಗೂ ಶಿಕ್ಷಕ ಮಂಜುನಾಥ್ ಮಾತನಾಡಿ, ಮಕ್ಕಳು ಚಿಕ್ಕಂದಿನಿಂದಲೇ ಎಲ್ಲ ಕ್ಷೇತ್ರದಲ್ಲೂ ತಮ್ಮ ಛಾಪನ್ನು ಮೂಡಿಸುವ ನಿಟ್ಟಿನಲ್ಲಿ ಆಸಕ್ತಿ ವಹಿಸಬೇಕು ಮತ್ತು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ಇದು ಸೂಕ್ತ ವೇದಿಕೆಯಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ಮಕ್ಕಳು ಬಾಗವಹಿಸಲು ಪಾಲಕರು ಪ್ರೋತ್ಸಾಹಿಸಿದರೆ ಮಕ್ಕಳು ಎಂತಹದ್ದೇ ಕ್ಷೇತ್ರವಾದರೂ ಧೈರ್ಯದಿಂದ ಮುಂದೆ ಸಾಗಿ ಗೆದ್ದು ಬರಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಬಿಕ್ಕೋಡು ಹೋಬಳಿಯ 18 ಶಾಲೆಗಳ ವಿದ್ಯಾರ್ಥಿಗಳು ಕೆಸಗೋಡು ಗ್ರಾಮದ ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಶಾಲಾವರಣಕ್ಕೆ ತೆರಳಿದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ.ಜಗದೀಶ ನಾಯ್ಕ, ಗ್ರಾಪಂ ಉಪಾಧ್ಯಕ್ಷೆ ತೇಜಸ್ವಿ, ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಚಂದ್ರಯ್ಯ, ನವೀನ್ ಕುಮಾರ್, ಚಿಕ್ಕಮ್ಮ, ರತ್ನಾ, ಪಿಡಿಒ ಅನಿತಾ, ಸಿಆರ್‌ಪಿ ರಾಮಯ್ಯ, ಶಿಕ್ಷಕಿಯರಾದ ಸುಮಾ, ಮೈತ್ರಾ, ಶಿಕ್ಷಕ ಸಂಪತ್ ಇದ್ದರು.