ಜಿಲ್ಲೆ

ಮಕ್ಕಳಿಗೆ ನೋಟ್‍ಪುಸ್ತಕ ಉಚಿತ ವಿತರಣೆ

ಬೀದರ್: ಚಿತ್ರನಟ ಪುನೀತ್ ರಾಜಕುಮಾರ ಪ್ರಥಮ ಪುಣ್ಯತಿಥಿ ಪ್ರಯುಕ್ತ ಜೈ ಭಾರತ ಮಾತಾ ಸೇವಾ ಸಮಿತಿ ವತಿಯಿಂದ ಭಾಲ್ಕಿ ತಾಲ್ಲೂಕಿನ ಖಾನಾಪುರದಲ್ಲಿ ವಿದ್ಯಾರ್ಥಿಗಳಿಗೆ ನೋಟ್‍ಪುಸ್ತಕ, ಪೆನ್ನು ಹಾಗೂ ಪೆನ್ಸಿಲ್‍ಗಳನ್ನು ಉಚಿತವಾಗಿ ವಿತರಿಸಲಾಯಿತು.
ಗ್ರಾಮದ ಸಮಿತಿಯ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಮಿತಿಯ ಭಾಲ್ಕಿ ತಾಲ್ಲೂಕು ಘಟಕದ ಅಧ್ಯಕ್ಷ ಪಪ್ಪು ಪಾಟೀಲ ಖಾನಾಪುರ ಅವರು, ಪುನೀತ್ ರಾಜಕುಮಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವ ಸಮರ್ಪಿಸಿದರು.
ಪುನೀತ್ ರಾಜಕುಮಾರ ಕನ್ನಡ ಚಿತ್ರರಂಗದ ಮೇರು ನಟರಾಗಿದ್ದರು. ನಿಜ ಜೀವನದಲ್ಲೂ ಹಿರೋ ಆಗಿದ್ದರು. ಹೃದಯ ವೈಶಾಲ್ಯಕ್ಕೆ ಹೆಸರಾಗಿದ್ದರು. ಅಸಂಖ್ಯಾತ ಬಡವರು, ನಿರ್ಗತಿಕರು, ಅಸಹಾಯಕರಿಗೆ ಆಸರೆಯಾಗಿದ್ದರು ಎಂದು ಅವರು ಸ್ಮರಿಸಿದರು.
ಪುನೀತ್ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದರು. ಅವರು ನಮ್ಮ ಮಧ್ಯೆ ಇಲ್ಲದಿದ್ದರೂ ಜನಮಾನಸದಲ್ಲಿ ಈಗಲೂ ಅವರ ನೆನಪು ಹಚ್ಚಹಸಿರಾಗಿದೆ ಎಂದು ಹೇಳಿದರು.
ಯುವಕರು ಪುನೀತ್ ಅವರ ಆದರ್ಶಗಳನ್ನು ಪಾಲಿಸಬೇಕು. ಸಮಾಜಕ್ಕೆ ಕೊಡುಗೆ ನೀಡಲು ಪ್ರಯತ್ನಿಸಬೇಕು ಎಂದು ಹೇಳಿದರು.
ಸಮಿತಿಯ ಪ್ರಮುಖರಾದ ಬಾಲಾಜಿ, ನಿತಿಶ್ ಪಾಟೀಲ, ಸಿದ್ದು ಮಮದಾಪುರೆ ಮತ್ತಿತರರು ಇದ್ದರು.