ಮೈಸೂರು: ಆರೋಗ್ಯ ಇಲಾಖೆಯ ವತಿಯಿಂದ ಕೆ.ಆರ್.ನಗರ ಪಟ್ಟಣದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಇಂದ್ರಧನುಷ್ 5.0 ಅಭಿಯಾನಕ್ಕೆ ಶಾಸಕ ಡಿ.ರವಿಶಂಕರ್ ಅವರು ಮಗುವಿಗೆ ಲಸಿಕೆ ಹಾಕುವ ಮೂಲಕ ಚಾಲನೆ ನೀಡಿದರು.
ಲಸಿಕೆಯಿಂದ ವಂಚಿತರಾದ ಮಕ್ಕಳಿಗೆ ಮೊದಲನೆ ಹಂತದಲ್ಲಿ ಆ.7 ಮತ್ತು 12, ಎರಡನೇ ಹಂತ ಸೆ.11, 16 ಹಾಗೂ ಅ.9 ಮತ್ತು 14 ರಂದು ಸರ್ಕಾರದ ವತಿಯಿಂದ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಹಾಕಲಿದ್ದು, ತಾಯಿಂದಿರು ತಮ್ಮ ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಬೇಕು. ಮಕ್ಕಳಲ್ಲಿ ಕಾಣಿಸಿಕೊಳ್ಳುವ ದಡಾರ, ರುಬೆಲ್ಲಾ ಕಾಯಿಲೆಗಳನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಲಸಿಕೆ ಹಾಕಲಾಗುತ್ತದೆ. ತಾಯಿ ಮತ್ತು ಮಕ್ಕಳಿಗಾಗಿ ಆರೋಗ್ಯ ಇಲಾಖೆಯ ಮೂಲಕ ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದ್ದು, ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕರು ತಿಳಿಸಿದರು.
ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಉತ್ತಮ ಆರೋಗ್ಯ ಸೇವೆ ನೀಡುತ್ತಿದ್ದಾರೆ. ಆಸ್ಪತ್ರೆಗೆ ಅರಿವಳಿಕೆ ತಜ್ಞರನ್ನು ಶೀಘ್ರದಲ್ಲೇ ನಿಯೋಜನೆ ಮಾಡಲಾಗುವುದು. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ, ಮಕ್ಕಳ ತಜ್ಞ ಚಂದ್ರಶೇಖರ್, ಪುರಸಭೆ ಸದಸ್ಯ ಕೋಳಿಪ್ರಕಾಶ್, ದೊಡ್ಡೆಕೊಪ್ಪಲು ಗ್ರಾಪಂ ಸದಸ್ಯ ಕೆ.ಪಿ.ಜಗದೀಶ್, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ಡಾ.ದರ್ಶನ್, ಡಾ.ಭವಾನಿ, ಡಾ.ದಿವ್ಯತಾ, ಹಿರಿಯ ತಜ್ಞ ವೈದ್ಯ ಡಾ.ಶಿವಶಂಕರ್, ಅರಿವಳಿಕೆ ತಜ್ಞರಾದ ಡಾ.ಸೌಮ್ಯಾ, ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಹಿರಿಯ ಆರೋಗ್ಯ ನಿರೀಕ್ಷಕ ಕೆ.ವಿ.ರಮೇಶ್ ಮತ್ತಿತರರು ಹಾಜರಿದ್ದರು.