ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಪರಿಣಾಮಕಾರಿ ಇಂದ್ರಧನುಷ್ 5.0 ಕಾರ್ಯಕ್ರಮ ಯಶಸ್ವಿಯಾಗಿಸಲು ಎಲ್ಲ ತಾಯಂದಿರು ಮತ್ತು ಗರ್ಭಿಣಿಯರು ಸಕ್ರಿಯವಾಗಿ ಭಾಗವಹಿಸಿ ಅಗತ್ಯ ಲಸಿಕೆಗಳನ್ನು ಪಡೆಯಬೇಕು ಎಂದು ಜಿಪಂ ಸಿಇಒ ಸ್ವರೂಪ ಟಿ.ಕೆ. ಹೇಳಿದರು.
ನಗರದ ಜಿಲ್ಲಾ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವಿಭಾಗದಲ್ಲಿ ಸೋಮವಾರ ಏರ್ಪಡಿಸಿದ್ದ ಪರಿಣಾಮಕಾರಿ ಇಂದ್ರಧನುಷ್ 5.0 ಕಾರ್ಯಕ್ರಮದಲ್ಲಿ ಮಕ್ಕಳಿಗೆ ಲಸಿಕೆ ನೀಡುವ ಮೂಲಕ ಲಸಿಕಾಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಂದ್ರಧನುಷ್ ಕಾರ್ಯಕ್ರಮದಡಿ ನೀಡುವ ಲಸಿಕೆಯಿಂದ ಪ್ರಮುಖ ಕಾಯಿಲೆಗಳಿಂದ ರಕ್ಷಿಸಬಹುದು. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿ ಅನುಸಾರ, ವಯಸ್ಸಿಗನುಗುಣವಾಗಿ ಲಸಿಕೆ ಪಡೆಯದ, ಲಸಿಕೆ ವಂಚಿತ ಮತ್ತು ಲಸಿಕಾಕರಣಕ್ಕೆ ಬಾಕಿಯಿರುವ ಗರ್ಭಿಣಿಯರು, 5 ವರ್ಷದೊಳಗಿನ ಮಕ್ಕಳಿಗೆ ಮಿಷನ್ ಲಸಿಕೆ ನೀಡಲಾಗುವುದು. ವಿಶೇಷವಾಗಿ ಧಡಾರ್, ರುಬೆಲ್ಲಾ ರೋಗ ನಿರೋಧಕತೆ ಅಂತರ ಕಡಿಮೆ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ದುರ್ಬಲ ಸಮುದಾಯ ತಲುಪುವುದು ಮತ್ತು ಸಮುದಾಯ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿ, ಪರಿಣಾಮಕಾರಿ ಮಿಷನ್ ಇಂದ್ರಧನುಷ್‌ನಲ್ಲಿ ನೀಡಲಾದ ಲಸಿಕೆಗಳ ವಿವರವನ್ನು ಯು.ವೀನ್ ಪೋರ್ಟಲ್‌ನಲ್ಲಿ ದಾಖಲಿಸಿ, ಇ-ಲಸಿಕಾಕರಣ ಪ್ರಮಾಣಪತ್ರ ನೀಡಲಾಗುತ್ತದೆ. ಆ. 7ರಿಂದ 12ರವೆರೆಗೆ ಮೊದಲ ಸುತ್ತು, ಸ. 11ರಿಂದ 16 2ನೇ ಸುತ್ತು ಹಾಗೂ ಅ. 9ರಿಂದ 14ರವರೆಗೆ 3ನೇ ಸುತ್ತು ನಡೆಯಲಿದೆ. ಈ ದಿನಗಳಲ್ಲಿ ಆಶಾ, ಆರೋಗ್ಯ ಕಾರ್ಯಕರ್ತರು ನಿಗದಿತ ಸ್ಥಳಗಳಲ್ಲಿದ್ದು, ಅರ್ಹರಿಗೆ ಲಸಿಕೆ ನೀಡುತ್ತಾರೆ. ಇದರಲ್ಲಿ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳು ಸಹಕಾರ ನೀಡಲಿವೆ ಎಂದರು.
ಆರ್‌ಸಿಎಚ್‌ಒ ಡಾ. ಎಸ್.ಎಂ.ಹೊನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಡಾ. ಶ್ರೀನಿವಾಸುಲು, ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಪಿ.ಪೂಜಾರ, ಡಾ. ಸಂತೋಷ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ವೈದ್ಯರು, ಸಿಬ್ಬಂದಿ, ಇತರರು ಇದ್ದರು.
ಡಾ. ರಾಜೇಂದ್ರ ಹಳ್ಳಿಕೇರಿ ಸ್ವಾಗತಿಸಿದರು. ನಾಗವೇಣಿ ವಂದಿಸಿದರು.