ಎಚ್.ಡಿ.ಕೋಟೆ: ಪ್ರತಿಯೊಂದು ಸಮಾಜವು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ವಿದ್ಯೆಗೆ ತಕ್ಕಂತೆ ಉದ್ಯೋಗ ಸಿಕ್ಕರೆ ಮಾತ್ರ ಸಮಾಜ ಮುಂದೆ ಬರಲು ಸಾಧ್ಯ. ಹಾಗಾಗಿ ಪಾಲಕರು ಹಾಗೂ ಸಮುದಾಯದ ನಾಯಕರು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕಡೆ ಗಮನ ಹರಿಸಬೇಕು ಎಂದು ಶಾಸಕ ಅನಿಲ್ ಚಿಕ್ಕಮಾದು ಸಲಹೆ ನೀಡಿದರು.
ಪಟ್ಟಣದ ಜೈನ್ ಭವನದಲ್ಲಿ ಭಾನುವಾರ ತಾಲೂಕು ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ವಿಶ್ವಕರ್ಮ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ನನ್ನ ಅಧಿಕಾರ ಅವಧಿಯಲ್ಲಿ ಸಣ್ಣ ಸಮಾಜಗಳನ್ನು ಗುರುತಿಸುವ ಕೆಲಸವನ್ನು ಮಾಡುತ್ತೇನೆ ಎಂದರು.
ಈ ಹಿಂದೆ ಶಾಸಕನಾಗಿದ್ದಾಗ ವಿಶ್ವಕರ್ಮ ಸಮಾಜಕ್ಕೆ ಪ್ರಾತಿನಿಧ್ಯ ನೀಡಿದ್ದೇನೆ. ಮುಂದೆಯೂ ಕೂಡ ನೀಡುತ್ತೇನೆ. ಸಮುದಾಯಕ್ಕೆ ರಾಜಕೀಯ ಸ್ಥಾನ-ಮಾನ ನೀಡಲು ನಾನು ಬದ್ದನಾಗಿದ್ದು, ಸರ್ಕಾರದ ವತಿಯಿಂದ ನಾಮನಿರ್ದೇಶನ ಮಾಡುವ ಸಂದರ್ಭದಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲು ಕ್ರಮ ವಹಿಸುವುದಾಗಿ ಭರವಸೆ ನೀಡಿದರಲ್ಲದೆ, ನಾನು ವೈಯಕ್ತಿಕವಾಗಿ ಒಂದು ಲಕ್ಷ ರೂ. ಹಣವನ್ನು ಟ್ರಸ್ಟ್ ಗೆ ನೀಡುತ್ತಿದ್ದು, ಅದನ್ನು ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಬುದ್ಧ್ದ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ತಾಲೂಕಿನ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಕೈಗಾರಿಕೆ ಸ್ಥಾಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಕ್ರಮ ವಹಿಸಲಾಗುವುದು ಎಂದರು.
ಗೃಹಲಕ್ಷ್ಮೀ ಯೋಜನೆಗೆ ತಾಲೂಕಿನ ಎಲ್ಲ ಮಹಿಳೆಯರು ಆದಷ್ಟು ಬೇಗ ಅರ್ಜಿ ಹಾಕುವ ಕೆಲಸ ಮಾಡಬೇಕು. ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯತಿ ಹಾಗೂ ಪುರಸಭಾ ವ್ಯಾಪ್ತಿಯಲ್ಲಿ ಅರ್ಜಿ ಹಾಕುವ ವ್ಯವಸ್ಥೆ ಮಾಡಿದ್ದು, ಜನತೆ ಸದುಪಯೋಗ ಮಾಡಿಕೊಳ್ಳಬೇಕು. ಮುಂದಿನ ತಿಂಗಳಲ್ಲಿ ಮಹಿಳೆಯರ ಖಾತೆಗೆ ಹಣ ಜಮಾ ಆಗಲಿದೆ ಎಂದರು. ಬಡವರ ಬಗ್ಗೆ ಕಾಳಜಿ ಇರುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಮಾತ್ರ ಎಂದರು.
ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಟ್ರಸ್ಟ್ ಅಧ್ಯಕ್ಷ ನಾಗರಾಜಪ್ಪ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಮುದಾಯದ 20 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಶಾಸಕ ಅನಿಲ್ ಚಿಕ್ಕಮಾದು ಅವರನ್ನು ವಿಶ್ವಕರ್ಮ ಸಮುದಾಯದ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಿ.ರವಿ, ಪುರಸಭಾ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ಮಹಾದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಪ್ರಣಾವಮೂರ್ತಿ, ಕಾರ್ಯದರ್ಶಿ ಕೆಂಡಗಣ್ಣಸ್ವಾಮಿ, ಮುಖಂಡರಾದ ಕಾವೇರ, ಯೋಗಣ್ಣಚಾರ್, ಬಿ.ಬಸವರಾಜಪ್ಪ, ನಂಜುಂಡಸ್ವಾಮಿ, ಆನಂದ, ಸರಗೂರು ಬಸವರಾಜು, ರವಿ, ವಿಶ್ವನಾಥ, ಆಲನಹಳ್ಳಿ ಬಸವರಾಜು, ಶಿವು, ಗ್ಯಾಸ್ ಸೋಮಶೇಖರ್, ಮೋಹನ್, ಚಂದ್ರಶೇಖರ್, ಮುರುಳಿ ಇದ್ದರು.