ಕೆ.ಆರ್.ನಗರ: ಮುಖ್ಯಶಿಕ್ಷಕರು ಶಾಲೆಯ ಸಹಶಿಕ್ಷಕರು ಹಾಗೂ ಸಿಬ್ಬಂದಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಶಾಸಕ ಡಿ.ರವಿಶಂಕರ್ ಸಲಹೆ ನೀಡಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ತಾಲೂಕಿನ ಹಿರಿಯ ಮತ್ತು ಬಡ್ತಿ ಮುಖ್ಯಶಿಕ್ಷಕರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಸರ್ಕಾರದ ಗಮನ ಸೆಳೆಯಲು ಬದ್ದನಿದ್ದೇನೆ ಎಂದರು.
ಶಾಲೆಗಳಿಗೆ ಅಗತ್ಯವಿರುವ ಮೂಲ ಸವಲತ್ತುಗಳನ್ನು ಸರ್ಕಾರದ ವತಿಯಿಂದ ಕೊಡಿಸಲಾಗುತ್ತದೆ. ಶಿಕ್ಷಕರು ಸಮನ್ವಯತೆಯಿಂದ ಕೆಲಸ ಮಾಡುವ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣದ ಜತೆಗೆ ಒಳ್ಳೆಯ ಸಂಸ್ಕಾರ ಕಲಿಸಬೇಕು. ಶಾಲಾ ಹಂತದಲ್ಲೇ ಜಾತ್ಯತೀತ ಮನೋಭಾವ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಮುಖ್ಯಶಿಕ್ಷಕರ ಸಂಘದ ಕಚೇರಿ ಆರಂಭಿಸಲು ಗುರುಭವನದಲ್ಲಿ ಕೊಠಡಿ ಕೊಡಿಸುವುದರ ಜತೆಗೆ ಬಿಸಿಯೂಟ ನಿರ್ವಹಣೆಯಿಂದ ಮುಖ್ಯಶಿಕ್ಷಕರನ್ನು ವಿಮುಕ್ತಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬಡ್ತಿ ಹೊಂದಿದ ಮುಖ್ಯಶಿಕ್ಷಕರಿಗೆ ಪ್ರತ್ಯೇಕ ವೇತನ ಶ್ರೇಣಿ, ವಾರ್ಷಿಕ 30 ಗಳಿಕೆ ರಜೆಗಳನ್ನು ನೀಡುವಂತೆ ಬೇಡಿಕೆ ಸಲ್ಲಿಸಿದ್ದು, ಇದು ರಾಜ್ಯಮಟ್ಟದ ವಿಚಾರವಾಗಿರುವುದರಿಂದ ಎಲ್ಲ ಕ್ಷೇತ್ರಗಳ ಸಂಘದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಸಲಹೆ ನೀಡಿದ ಶಾಸಕರು, ಸದನದಲ್ಲಿ ಈ ಬಗ್ಗೆ ಚರ್ಚಿಸಿ ಪರಿಹಾರ ಕಲ್ಪಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ರಾಮಕೃಷ್ಣ, ಗೌರವಾಧ್ಯಕ್ಷ ಕುಮಾರೇಗೌಡ, ಪ್ರಧಾನ ಕಾರ್ಯದರ್ಶಿ ಸೈಯದ್ ರಿಜ್ವಾನ್, ಉಪಾಧ್ಯಕ್ಷರಾದ ರಾಮಪ್ರಸಾದ್, ಮಂಜುರಾಜ್, ಖಜಾಂಚಿ ಪುಟ್ಟಯ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಲೇಂದ್ರ, ಶಶಿಧರ್, ದೇವಕುಮಾರ್, ವೀರಭದ್ರಸ್ವಾಮಿ, ದೇವರಾಜೇಗೌಡ, ಕೃಷ್ಣೇಗೌಡ, ರಾಮೇಗೌಡ, ಮೇಲೂರು ರಮೇಶ್, ಮಂಜು, ಜಯಶಂಕರ, ದೇವರಾಜ, ಪ್ರಕಾಶ್, ಭಾಸ್ಕರ್, ಶಿವಲಿಂಗಯ್ಯ, ಶಿಕ್ಷಣ ಸಂಯೋಜಕ ದಾಸಪ್ಪ ಮತ್ತಿತರರು ಇರಿದ್ದರು.