ಬಸವಕಲ್ಯಾಣದ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಸದ್ಗುರು ಶ್ರೀ ಮೌನೇಶ್ವರ ಜಾತ್ರೋತ್ಸವ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಶ್ರೀನಿವಾಸ ಸ್ವಾಮೀಜಿ, ಡಾ.ಜಿ.ಎಸ್.ಭುರಳೆ, ಸೂರ್ಯಕಾಂತ ಶೀಲವಂತ, ಈರಣ್ಣ ಪಂಚಾಳ ಇದ್ದರು. 
ಜಿಲ್ಲೆ

ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ

ಬಸವಕಲ್ಯಾಣ: ಪುರಾಣ, ಪ್ರವಚನ, ಸತ್ಸಂಗ, ಸಾಹಿತ್ಯ ಸಂಗೀತ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಸಮಾಜದಲ್ಲಿ ಸ್ವಚ್ಛತೆಗೆ ಗುರು ಮಾರ್ಗದರ್ಶನ ಬೇಕು. ಚಿಂತೆ ಮಾಡುವುದನ್ನು ಬಿಟ್ಟು ಚಿಂತನೆ ಮಾಡುವುದನ್ನು ಕಲಿಸಿಕೊಡಲು ಗುರುವಾಣಿ ಅವಶ್ಯಕ ಎಂದು ವಿಶ್ವಕರ್ಮ ಏಕದಂಡಗಿ ಮಠದ ಪೀಠಾಧೀಶ ಶ್ರೀ ಶ್ರೀನಿವಾಸ ಮಹಾಸ್ವಾಮೀಜಿ ನುಡಿದರು.

ನಗರದ ಸರ್ವೋದಯ ಕಾಲನಿಯ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಸದ್ಗುರು ಶ್ರೀ ಮೌನೇಶ್ವರ ೧೫ನೇ ವರ್ಷದ ಜಾತ್ರೋತ್ಸವ ನಿಮಿತ್ತ ಶುಕ್ರವಾರ ಹಮ್ಮಿಕೊಂಡ್ದಿದ್ದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು, ಜಾತ್ರೋತ್ಸವದ ನಿಮಿತ್ತ ಪ್ರವಚನ, ಸಾಮೂಹಿಕ ಉಪನಯನ ಸೇರಿ ವಿವಿಧ ಕಾರ್ಯಕ್ರಮ ನಡೆಸಲಾಗಿದ್ದು, ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿಕೊಡುವ ಕಾರ್ಯ ತಾಯಂದಿರು ಮಾಡಬೇಕು ಎಂದರು.

ಹಟಗಾರ ಸಮಾಜದ ಅಧ್ಯಕ್ಷ ಡಾ.ಜಿ.ಎಸ್.ಭುರಳೆ ಮಾತನಾಡಿ, ಒತ್ತಡದ ಜೀವನ ಪದ್ಧತಿಯಲ್ಲಿ ಮನುಷ್ಯನಿಗೆ ಶಾಂತಿ ಇಲ್ಲ. ಮನಸ್ಸು ಶುದ್ಧಗೊಳಿಸಲು, ಆದರ್ಶ ಬದುಕಿಗೆ ಬೇಕಿರುವ ನೌತಿಕ ಮೌಲ್ಯಗಳನ್ನು ಬೆಳೆಸಲು ಪುರಾಣ, ಪ್ರವಚನಗಳು ಸಹಕಾರಿಯಾಗುತ್ತದೆ ಎಂದರು.

ಶೀಲವಂತ ಸಮಾಜದ ಅಧ್ಯಕ್ಷ ಸೂರ್ಯಕಾಂತ ಶೀಲವಂತ ಮಾತನಾಡಿದರು. ಕಿಟ್ಟಾದ ಶ್ರೀ ಸಿದ್ದೇಶ್ವರ ಶಿವಾಚಾರ್ಯರು ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದರು.

ವಿಶ್ವಕರ್ಮ ಸಮಾಜದ ಅಧ್ಯಕ್ಷ ಈರಣ್ಣ ಪಂಚಾಳ, ಸುಲೋಚನಾ ಪಂಚಾಳ, ಪತ್ರಕರ್ತ ಅಖಂಡೇಶ್ವರ ಪೋದ್ದಾರ ಇತರರಿದ್ದರು. ಪ್ರಧಾನ ಕಾರ್ಯದರ್ಶಿ ವೈಜಿನಾಥ ಪಂಚಾಳ ಸ್ವಾಗತಿಸಿ, ನಿರೂಪಣೆ ಮಾಡಿದರು. ಸಂಗೀತ ಕಲಾವಿದ ಶಿವಕುಮಾರ ಪಂಚಾಳ ಹಾಗೂ ಸಂಗಡಿಗರಿಂದ ನಡೆದ ಸಂಗೀತ ಕಾರ್ಯಕ್ರಮಲ್ಲಿ ಭಕ್ತಿ ಗೀತೆ, ಭಾವಗೀತೆ, ಜಾನಪದ ಗೀತೆ ಹಾಡಿದರು.

ಸನ್ಮಾನ: ಡಾ.ಜಿ.ಎಸ್.ಭುರಳೆ, ಗೋಲ್ಡ್ ಮಾರ್ಕೇಟ್ ಅಧ್ಯಕ್ಷ ಬಾಳಾಸಾಹೇಬ್ ಕುಲ್ಕರ್ಣಿ, ಭಾರತೀಯ ದಲಿತ ಪ್ಯಾಂಥರ್ ತಾಲೂಕು ಅಧ್ಯಕ್ಷ ರವಿ ಗಾಯಕವಾಡ, ರೆಡ್ಡಿ ಸಮಾಜದ ತಾಲೂಕು ಅಧ್ಯಕ್ಷ ವಿಜಯಕುಮಾರ ರೆಡ್ಡಿ, ಶೀಲವಂತ ಸಮಾಜದ ತಾಲೂಕು ಅಧ್ಯಕ್ಷ ಸೂರ್ಯಕಾಂತ ಅವರನ್ನು ಸನ್ಮಾನಿಸಲಾಯಿತು.

ವೈಭವದ ಮೆರವಣಿಗೆ: ಶ್ರೀ ಮೌನೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಶನಿವಾರ ನಗರದಲ್ಲಿ ಮೌನೇಶ್ವರರ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ವೈಭವದೊಂದಿಗೆ ಜರುಗಿತು. ಅಲಂಕೃತ ವಾಹನದಲ್ಲಿ ಮೌನೇಶ್ವರರ ಭಾವಚಿತ್ರದೊಂದಿಗೆ ದೇವಸ್ಥಾನದಿಂದ ಅಲ್ಲಪ್ರಭು ಗದ್ದು, ಬಸವೇಶ್ವರ ವೃತ್ತದ ಮೂಲಕ ಮುಖ್ಯ ರಸ್ತೆ ಮಾರ್ಗವಾಗಿ ದೇವಸ್ಥಾನದವರೆಗೆ ನಡೆಯಿತು.