ಜಿಲ್ಲೆ

ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದ ಚುಂಚಶ್ರೀ

ನಾಗಮಂಗಲ: ಆದಿಚುಂಚನಗಿರಿ ಮಠದಲ್ಲಿ ಪದ್ಧತಿಯಂತೆ ಶರನ್ನವರಾತ್ರಿಯ 6ನೇ ದಿನವಾದ ಶುಕ್ರವಾರ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲದ ಆವರಣದಲ್ಲಿ ಸರಸ್ವತಿ ಪೂಜೆ ನೆರವೇರಿಸಿ, ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಿದರು.


ಸರಸ್ವತಿ ಪೂಜೆ ಮತ್ತು ಮಕ್ಕಳಿಗೆ ಅಕ್ಷರಭ್ಯಾಸ ಕಾರ್ಯಕ್ರಮದಲ್ಲಿ ಸರಸ್ವತಿ ವಿಗ್ರಹಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೇತೃತ್ವದಲ್ಲಿ ಪೂಜೆ, ಅಭಿಷೇಕದೊಂದಿಗೆ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.


ಪೂಜೆಯ ನಂತರ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು 50ಕ್ಕೂ ಹೆಚ್ಚು ಮಕ್ಕಳ ಕೈಯಿಂದ ನವಿಲುಗರಿ ಹಿಡಿದು ಓಂ ಹಾಗೂ ವರ್ಣಮಾಲೆಯ ಅಕ್ಷರಗಳನ್ನು ಬರೆಸಿದರು.


ಈ ಸಂದರ್ಭ ಮಕ್ಕಳು ಹಾಗೂ ಪೋಷಕರಿಂದ ಮಂತ್ರ ಪಠಣ ಮಾಡಿಸಲಾಯಿತು. ಮಠದ ಪ್ರಧಾನ ಕಾರ್ಯದರ್ಶಿ ಶ್ರೀಪ್ರಸನ್ನನಾಥ ಸ್ವಾಮೀಜಿ, ಶ್ರೀ ಚೈತನ್ಯನಾಥ ಸ್ವಾಮೀಜಿ, ಶ್ರೀಸಾಯಿಕೀರ್ತಿ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಎ.ಟಿ.ಶಿವರಾಮು ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.