ಜಿಲ್ಲೆ

ಮಕ್ಕಳಿಗಾಗಿ ಪ್ರತ್ಯೇಕ ಸೆಂಟರ್ ಸ್ಥಾಪನೆ

ಧಾರವಾಡ: ಮುಂದಿನ ದಿನಗಳಲ್ಲಿ ಬರಬಹುದಾದ ಕೋವಿಡ್ 3ನೇ ಅಲೆ ತಡೆ ಮತ್ತು ನಿರ್ವಹಣೆಗಾಗಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಕ್ಕಳ ಆರೋಗ್ಯ ರಕ್ಷಣೆಗೆ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್​ಗಳನ್ನು ಸ್ಥಾಪಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರು, ವಿಕಲಚೇತನರ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಇಲ್ಲಿಯ ಜಿ.ಪಂ. ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲೆಯಲ್ಲಿ ಕರೊನಾ ಸಂಭಾವ್ಯ 3ನೇ ಅಲೆಯಿಂದ ಮಕ್ಕಳ ರಕ್ಷಣೆ ಮತ್ತು ಆರೈಕೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಭಾವ್ಯ 3ನೇ ಅಲೆಯ ತಡೆ ಮತ್ತು ನಿರ್ವಹಣೆಗಾಗಿ ಅಧಿಕಾರಿಗಳು ಮುತುವರ್ಜಿಯಿಂದ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದರು.

ಪ್ರತಿ ಕುಟುಂಬಕ್ಕೂ ಇಲಾಖೆಯ ಸೌಲಭ್ಯ ತಲುಪಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಶ್ಲಾಘನೀಯ. ಅವರ ಸೇವಾ ಭದ್ರತೆ, ಗೌರವ ಸಂಭಾವನೆ ಹೆಚ್ಚಳ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಬದ್ಧವಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಮಾತನಾಡಿ, ಮಕ್ಕಳಿಗೆ ಮಾಸ್ಕ್ ಧಾರಣೆಯ ಮಹತ್ವ ಗೊತ್ತಿಲ್ಲದೆ ನಿರ್ಲಕ್ಷ್ಯ ವಹಿಸಬಹುದು. ಹಾಗಾಗಿ ಮಕ್ಕಳಲ್ಲಿ ಅರಿವು ಮೂಡಿಸುವುದು ಮುಖ್ಯ. ಹೆಚ್ಚಿನ ಆರೈಕೆ, ಕಾಳಜಿಯ ಅಗತ್ಯವುಳ್ಳ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೌಷ್ಟಿಕ ಆಹಾರ ನೀಡಲಾಗುತ್ತದೆ ಎಂದರು.

ಇಲಾಖೆ ಉಪ ನಿರ್ದೇಶಕಿ ಭಾರತಿ ಶೆಟ್ಟರ್ ವಿವಿಧ ಕಾರ್ಯಕ್ರಮಗಳ ಪ್ರಗತಿ ಮಾಹಿತಿ ನೀಡಿದರು.

ಶಾಸಕರಾದ ಪ್ರಸಾದ ಅಬ್ಬಯ್ಯ, ಅಮೃತ ದೇಸಾಯಿ, ಕುಸುಮಾವತಿ ಶಿವಳ್ಳಿ, ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಈರಣ್ಣ ಜಡಿ, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿ.ಪಂ. ಸಿಇಒ ಡಾ. ಸುಶೀಲಾ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ, ಇತರರು ಇದ್ದರು.

ಕೋವಿಡ್ 3ನೇ ಅಲೆ ಎದುರಿಸಲು ಸಿದ್ಧ

ಧಾರವಾಡ: ರಾಜ್ಯದಲ್ಲಿ 3ನೇ ಅಲೆ ಬರುವ ಸಾಧ್ಯತೆಯನ್ನು ಡಾ. ದೇವಿಪ್ರಸಾದ ಶೆಟ್ಟಿ ನೇತೃತ್ವದ ಸಮಿತಿ ವರದಿ ನೀಡಿದೆ. ಅದನ್ನು ಎದುರಿಸಲು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 3ನೇ ಅಲೆಯ ಮುಂಜಾಗ್ರತೆ ಕ್ರಮವಾಗಿ ಅಗತ್ಯ ಆಕ್ಸಿಜನ್, ವೆಂಟಿಲೇಟರ್, ಸಾಮಾನ್ಯ ಏಆಔಆಘಎಬೆಡ್, ಐಸಿಯು ಬೆಡ್ ವ್ಯವಸ್ಥೆ ಮತ್ತು ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಕ್ಕಳಲ್ಲಿ ಕರೊನಾ ದೃಢಪಟ್ಟರೆ ಚಿಕಿತ್ಸೆಗಾಗಿ ಪ್ರತಿ ತಾಲೂಕು ಕೇಂದ್ರಗಳಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಮಗುವಿನ ಆರೈಕೆಗೆ ತಾಯಿಗೂ ಅವಕಾಶ ನೀಡಲಾಗುವುದು ಎಂದರು.

ಕೋವಿಡ್ 2ನೇ ಅಲೆಯಿಂದ ರಾಜ್ಯದಲ್ಲಿ 52 ಮಕ್ಕಳು ತಂದೆ- ತಾಯಿಯನ್ನು ಕಳೆದುಕೊಂಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಮೂವರು ಮಕ್ಕಳು ತಂದೆ- ತಾಯಿಯನ್ನು ಕಳೆದುಕೊಂಡಿದ್ದಾರೆ. ಅಂಥ ಮಕ್ಕಳಿಗೆ ಅಗತ್ಯ ಧನಸಹಾಯ, ಉಚಿತ ಶಿಕ್ಷಣ, ಹೆಣ್ಣು ಮಗುವಿಗೆ 21 ವರ್ಷ ತುಂಬಿದ ನಂತರ 1 ಲಕ್ಷ ರೂ. ನೀಡಲಾಗುವುದು. ರಾಜ್ಯದಲ್ಲಿ ತಂದೆ ಅಥವಾ ತಾಯಿಯನ್ನು ಕಳೆದಕೊಂಡ 134 ಮಕ್ಕಳನ್ನು ಬಾಲಸ್ವರಾಜ್ ವೆಬ್​ಪೋರ್ಟಲ್​ನಲ್ಲಿ ದಾಖಲಿಸಲಾಗುತ್ತಿದೆ. ಈ ಮಕ್ಕಳಿಗೆ ಯಾವ ರೀತಿ ನೆರವು ಕಲ್ಪಿಸಬೇಕು ಎಂಬುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದರು.

ಪ್ರಕರಣ ನ್ಯಾಯಾಲಯದಲ್ಲಿದೆ

ಸಿಡಿ ಪ್ರಕರಣ ಕುರಿತು ಮಹಿಳಾ ಆಯೋಗದಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಮಧ್ಯಪ್ರವೇಶಿಸಲು ಬರುವುದಿಲ್ಲ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು. ಈಗಾಗಲೇ ಸಂಬಂಧಿಸಿದ ಯುವತಿಯೊಂದಿಗೆ ಮಾತನಾಡಿದ್ದೇನೆ. ಏನಾದರೂ ಸಮಸ್ಯೆಯಾದರೆ ಗಮನಕ್ಕೆ ತರಲು ಹೇಳಿದ್ದೇನೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಆ ಬಗ್ಗೆ ಹೆಚ್ಚಿಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.

ಜಿಲ್ಲಾದ್ಯಂತ ಮಕ್ಕಳ ಕಾಳಜಿ ಕೇಂದ್ರ

ಧಾರವಾಡ ಜಿಲ್ಲೆಯಲ್ಲಿ 16 ವರ್ಷದೊಳಗಿನ 4.6 ಲಕ್ಷ ಮಕ್ಕಳಿದ್ದು, ಸಂಭಾವ್ಯ ಕೋವಿಡ್ 3ನೇ ಅಲೆ ಎದುರಿಸಲು ಇಲಾಖೆಯಿಂದ ಅಗತ್ಯ ಸಿದ್ಧತೆ ಮಾಡಲಾಗಿದೆ. ಜಿಲ್ಲೆಯ 144 ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಕೋವಿಡ್ ಕಾಳಜಿ ಕೇಂದ್ರ, ನಗರ ವ್ಯಾಪ್ತಿಯಲ್ಲಿ 10ರಿಂದ 20 ಕಾಳಜಿ ಕೇಂದ್ರ ತೆರೆಯಲು ಸೂಚಿಸಲಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಕೋವಿಡ್ ಮೊದಲ ಅಲೆಯಲ್ಲಿ 1479 ಮಕ್ಕಳು, 2ನೇ ಅಲೆಯಲ್ಲಿ 2143 ಮಕ್ಕಳು ಸೋಂಕಿಗೆ ತುತ್ತಾದರೂ, ಗಂಭೀರ ಲಕ್ಷಣಗಳು ಕಾಣಿಸಲಿಲ್ಲ. 18 ಮಕ್ಕಳು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದರು ಎಂದರು.

ಮಕ್ಕಳಿಗಾಗಿ ಸ್ಥಾಪಿಸುವ ಕಾಳಜಿ ಕೇಂದಗಳಲ್ಲಿ ಪೌಷ್ಟಿಕ ಆಹಾರ, ಬಾಲಕ- ಬಾಲಕಿಯರಿಗೆ ಪ್ರತ್ಯೇಕ ಕೊಠಡಿ, ಚಿಕ್ಕ ಮಕ್ಕಳೊಂದಿಗೆ ತಾಯಿ ಇರುವ ವ್ಯವಸ್ಥೆ ಮಾಡಲಾಗುವುದು.

ಕೋವಿಡ್​ನಿಂದ ತಂದೆ- ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಆರ್ಥಿಕ ನೆರವು, ಉಚಿತ ಶಿಕ್ಷಣ, ಎಸ್ಸೆಸ್ಸೆಲ್ಸಿ ನಂತರ ಟ್ಯಾಬ್ ವಿತರಿಸಲಾಗುವುದು. ಇಂಥ ಮಕ್ಕಳನ್ನು ಸಾಕಲು ಪೋಷಕರು ನಿರಾಕರಿಸಿದರೆ ಇಲಾಖೆಯಿಂದ ದತ್ತು ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ತಿಳಿಸಿದರು.

ವರದಿ ನೀಡಲು ಸೂಚನೆ

ಹುಬ್ಬಳ್ಳಿ ಉಣಕಲ್ ಬಾಲಕರ ಬಾಲಮಂದಿರದಲ್ಲಿ ಮಕ್ಕಳಿಗೆ ವಿತರಿಸುವ ಪೌಷ್ಟಿಕ ಆಹಾರ ಹಾಗೂ ಸಾಮಗ್ರಿಗಳನ್ನು ನೀಡದೆ, ಅಧಿಕಾರಿಗಳು ಮನೆಗೆ ಒಯ್ದ ಬಗ್ಗೆ ಮಕ್ಕಳು ಇಲಾಖೆ ನಿರ್ದೇಶಕರು ಮತ್ತು ಸಿಎಂ ಅವರಿಗೆ ಪತ್ರ ಬರೆದಿರುವುದು ತಮ್ಮ ಗಮನಕ್ಕೆ ಬಂದಿಲ್ಲ ಎಂದು ಸಚಿವೆ ಜೊಲ್ಲೆ ತಿಳಿಸಿದರು. ಗಮನಕ್ಕೆ ತಾರದ ಅಧಿಕಾರಿಗಳ ವಿರುದ್ಧ ಗರಂ ಆದ ಸಚಿವೆ, ವರದಿ ನೀಡಲು ಸೂಚಿಸಿದರು.