ಚಾಮರಾಜನಗರ: ಜಗತ್ತಿನ ಅತ್ಯಂತ ಎತ್ತರ ಮತ್ತು ಭಾರತದ ಅತ್ಯಂತ ಪ್ರಾಚೀನ ಮರ, ಡೈನೊಸಾರ್ ಕಾಲದಲ್ಲಿದ್ದ ಮರಗಳು, ಮರಗಳ ಉಳಿವಿನ ಹೋರಾಟಗಳು, ಅಪರೂಪದ ಮರಗಳ ಸಂತತಿಯನ್ನು ಉಳಿಸಲು ಮರವೇರಿ ತಾವೇ ಕೃತಕ ಪರಾಗಸ್ಪರ್ಶ ಮಾಡಿದ ವಿಜ್ಞಾನಿಗಳ ಕುರಿತ ಕೌತುಕಗಳನ್ನು ಮಕ್ಕಳು ಅನಾವರಣ ಮಾಡುತ್ತಿದ್ದರೇ ನೆರೆದವರು ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು.
ನಗರದ ದೀನಬಂಧು ಶಿಕ್ಷಕ ಸಂಪನ್ಮೂಲ ಕೇಂದ್ರದ ವಿಜ್ಞಾನ ಲೋಕ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಮರ-ಭೂಮಿ ತಾಯಿಯ ವರ ಎಂಬ ವಿನೂತನ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳಿದು.
ವಿದ್ಯಾರ್ಥಿಗಳಿಗೆ ಅಪರೂಪದ ಗಿಡ, ಮರಗಳ ಮಹತ್ವವನ್ನು ತಿಳಿಸಲು ಹಾಗೂ ಅಳಿವಿನಂಚಿನಲ್ಲಿರುವ ವಿವಿಧ ಪ್ರಭೇದದ ಗಿಡಗಳನ್ನು ನೆಟ್ಟು ಬೆಳೆಸಲು ಹಾಗೂ ಜೀವವೈವಿಧ್ಯೆತೆಯಲ್ಲಿ ಮರಗಳ ಪ್ರಾಮುಖ್ಯತೆಯನ್ನು ತಿಳಿಸಲು ಗ್ಯಾಲರಿಯನ್ನು ನಿರ್ಮಾಣ ಮಾಡಲಾಗಿತ್ತು. ಈ ಗ್ಯಾಲರಿಯಲ್ಲಿ ಮರಕ್ಕೆ ಎಷ್ಟು ಆಯಸ್ಸು, ಭಾರತದ ಅತ್ಯಂತ ಹಳೆಯ ಮರ, ಜಗತ್ತಿನ ಅತ್ಯಂತ ಎತ್ತರದ ಮರ, ಕೀಸ್ಟೋನ್ ಪ್ರಭೇದದ ಮರಗಳು, ಪವಿತ್ರ ವನ-ದೇವರ ಕಾಡು, ನೆಡುತೋಪು ಕಾಡು, ವೈವಿಧ್ಯಮಯ ಮರಗಳು, ಪರಿಸರದಲ್ಲಿ ಮರಗಳ ಪಾತ್ರ, ದೊಡ್ಡಸಂಪಿಗೆ ಮರ, ಮರಗಳಿಂದ ತಯಾರಿಸುವ ಔಷಧ, ಡೈನೋಸಾರ್ ಕಾಲದ ಮರಗಳು, ಕಾಡು ಉಳಿಸುವ ಹೋರಾಟಗಳು, ಅಪಾಯದ ಅಂಚಿನಲ್ಲಿರುವ ಕರ್ನಾಟಕದ ಮರಗಳು, ಮರಗಳ ವಂಶೋದ್ಧಾರಕರು, ಮರಗಳ ಕುರಿತಾದ ಕವಿತೆಗಳು, ಮರಗಳನ್ನು ನೆಟ್ಟು ಪರಸರ ಸಂರಕ್ಷಣೆಯಲ್ಲಿ ನೀರತರಾಗಿರುವ ಮಹನೀಯರ ಪರಿಚಯ ಹಾಗೂ ಅಪರೂಪದ ಗಿಡ, ಮರ ಮತ್ತು ಬಳ್ಳಿಗಳ ಸಹಿತ ಅದರ ಮಾಹಿತಿಯನ್ನು ಪ್ರದರ್ಶನ ಮಾಡಲಾಗಿತ್ತು. ದೀನಬಂಧು ಶಾಲೆಯ ಮಕ್ಕಳು ನರೆದ ಗಣ್ಯರು ಹಾಗೂ ವಿವಿಧ ಶಾಲೆಗಳ ಮಕ್ಕಳಿಗೆ ಅದರ ವಿವರಣೆಯನ್ನು ನೀಡುವ ಮೂಲಕ ಪರಿಸರದಲ್ಲಿ ಮರಗಳ ಪಾತ್ರವನ್ನು ತಿಳಿಸುತ್ತಿದ್ದರು.
ಈ ಸಂದರ್ಭದಲ್ಲಿ ದೀನಬಂಧು ಸಂಸ್ಥೆ ಅಧ್ಯಕ್ಷ ಡಾ.ನಾಗಾರ್ಜುನ್, ಡಯಟ್ ಪ್ರಾಂಶುಪಾಲ ಕಾಶೀನಾಥ್, ನಿವೃತ್ತ ಪ್ರಾಧ್ಯಪಕಿ ಶಶಿಕಲಾ, ಜಯಂತಿ, ಗಾಯಿತ್ರಿ, ಜೆಎಸ್‌ಎಸ್ ಸಸ್ಯಶಾಸ್ತ್ರ ಪ್ರಾಧ್ಯಾಪಕಿ ರೇವನಾಂಭ, ಪರಿಸರ ಪ್ರೇಮಿ ವೆಂಕಟೇಶ್,ರಾಮೇಗೌಡ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಜರಿದ್ದರು.
ಜೀವವಿಕಾಸದಲ್ಲಿ ಮರಗಳು ಬಹುಮುಖ್ಯ:
ಜಗತ್ತಿನ ಜೀವವಿಕಾಸದಲ್ಲಿ ಮರಗಳು ಬಹುಮುಖ್ಯ ಪಾತ್ರವನ್ನು ವಹಿಸಿದೆ ಎಂದು ಪರಿಸರ ತಜ್ಞ ಡಾ.ಮುರುಳಿ ಕಲ್ಲೂರು ಹೇಳಿದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರದ ನಡುವೆ ಕಲಿಯುವ ಅವಕಾಶ ಅತ್ಯಂತ ದುಬಾರಿಯಾಗಿದ್ದು, ಇದು ಅಪರೂಪದ ಕಲಿಕೆಯೂ ಆಗಿದೆ. ಇದನ್ನು ವೈಜ್ಞಾನಿಕ ವಿನಮಯ ಎಂದು ಕೆರಯಬಹುದಾಗಿದ್ದು, ಮಕ್ಕಳ ಕೌತುಕದಿಂದ ಕಲಿಯುವುದು ಬಹಳಷ್ಟು ಇರುತ್ತದೆ. ಇಂತಹ ಕಾರ್ಯಕ್ರಮಗಳಿಂದ ಹೆಚ್ಚು ಜ್ಞಾನ ವೃದ್ಧಿಯಾಗುತ್ತದೆ ಎಂದು ಹೇಳಿದರು.
ದೀನಬಂಧು ಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಜಯದೇವ್ ಮಾತನಾಡಿ, ಇತ್ತೀಚಿಗೆ ಸರ್ಕಾರಿ ಶಾಲೆ ಮಕ್ಕಳು ಹೊರಗೆ ಹೋಗಬಾರದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಇದರಿಂದ ಮಕ್ಕಳು ಅನುಭವ ಕಲಿಕೆಯಿಂದ ವಂಚಿತರಾಗಲಿದ್ದಾರೆ. ಅವರನ್ನು ನಾಲ್ಕೂ ಗೋಡೆಗಳ ಒಳಗೆ ಕಟ್ಟಿಹಾಕದೇ, ಸರ್ವಾಂಗೀಣ ಕಲಿಕೆಗೆ ಅವಕಾಶ ಮಾಡಿಕೊಡಬೇಕು. ಇದನ್ನು ಸರ್ಕಾರ ಪುನರ್ ಪರಿಶೀಲಿಸಬೇಕು. ನಮ್ಮ ಸಂಸ್ಕೃತಿ, ಜಾನಪದ ಪರಂಪರೆಯಲ್ಲಿ ಮರಗಳೊಂದಿಗೆ ಭಾವನಾತ್ಮಕ ಸಂಬಂಧವಿದೆ. ಈ ನೆಲದಲ್ಲಿ ಮರಗಳನ್ನು ಉಳಿಸಲು ಪ್ರಾಣ ಬಿಟ್ಟವರು ಇದ್ದಾರೆ. ಮರಗಳ ಕುರಿತಾದ ಈ ಪ್ರದರ್ಶನ ಮತ್ತು ಕಲಿಕೆಯನ್ನು ಪ್ರತಿಯೊಂದು ಶಾಲೆಗಳಿಗೆ ನಾವೇ ಕೊಂಡೊಯ್ಯುತ್ತೇವೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕೂಡ ಈ ಕುರಿತು ಹೆಚ್ಚು ತಿಳಿದುಕೊಳ್ಳಬೇಕಿದೆ ಎಂದರು.
ಮರಗಳು ಉಳಿದಿದೆ, ಅರಮನೆಗಳು ಬಿದ್ದು ಹೋಗಿದೆ:
ಈ ನೆಲದಲ್ಲಿ ರಾಜರು ಕಟ್ಟಿದ್ದ ಎಷ್ಟೋ ಅರಮನೆಗಳು ಬಿದ್ದು ಹೋಗಿದೆ, ಆದರೆ ಪ್ರಕೃತಿ ನೆಟ್ಟ ಮರಗಳು ಇಂದಿಗೂ ಭೂಮಿಯ ಮೇಲೆ ಉಳಿದಿದೆ ಎಂದು ಹಿರಿಯ ಸಾಹಿತಿ ಕೃಷ್ಣಮೂರ್ತಿ ಹನೂರು ಹೇಳಿದರು. ಜಿಲ್ಲೆಯಲ್ಲಿರುವ 100 ವರ್ಷ ತುಂಬಿದ ಪ್ರತಿಯೊಂದು ಶಾಲೆಗಳ ಮುಂದೆ ಹಳೆಯದಾದ ಅರಳಿಮರಗಳು ಕಂಡುಬರುತ್ತವೆ. ಆದರೆ ಪ್ರಸ್ತುತ ಸರ್ಕಾರಿ ಶಾಲೆಗಳನ್ನು ಉರುಳಿಸಿ, ಮರಗಳನ್ನು ಕತ್ತರಿಸಲಾಗಿದೆ. ಸರ್ಕಾರಿ ಶಾಲೆಗಳನ್ನು, ಮರಗಳನ್ನು ಉಳಿಸುವ ಮನಸ್ಸು ಯಾರಿಗೂ ಇಲ್ಲದಂತಾಗಿದೆ. ಸರ್ಕಾರ ಈ ಕುರಿತು ಆಸಕ್ತಿಯನ್ನು ವಹಿಸಬೇಕಿದೆ. ಪ್ರಯೋಗದ ಮೂಲಕ ಪಾಠ ಹೇಳುವುದು ಅಗತ್ಯವಾಗಿದೆ. ಮಕ್ಕಳ ಮನಸ್ಸಿನಲ್ಲಿ ಅದು ಉಳಿದು ಬಿಡುತ್ತದೆ ಎಂದರು.
ಅಪರೂಪದ ಗಿಡಗಳ ಪ್ರದರ್ಶನ:
ಗ್ಯಾಲರಿಯಲ್ಲಿ ಕಕ್ಕಿಲು, ಮಾಟೆ, ಅಂಟುವಾಳ, ಪುಳುಮಾವು ಮರ, ಜೇನೆರಕು, ಪೀಕಿ ಅಂಬು, ಹಂದಿ ಬಾಣೆ ಹುಲ್ಲು, ಸಾಗಡೆ, ಹಾವು ಮಾರಿ ಗಡ್ಡೆ, ಅಲಿಗೆ ಗಿಡ, ಬೆಲ್ಲರೆ, ಬಜೆ, ಮಣಸೀಗೆ, ಕೌರಿ, ಕಾಡು ಕೊತ್ತಂಬರಿ, ಮಾಗಳಿ ಬೇರು, ಬೆಟ್ಟದನೆಲ್ಲಿ, ಇಳಿಸಿಂಗಿ, ಧೂಪದ ಮರ, ಹೊನ್ನೆಮರ, ದಡಸು, ಕಾಡು ಬಾಯಿಬಸ್ಲೆ, ಕೆಂದೆ, ಬಿಕ್ಕಿಲು, ಲಕೋಟೆ, ನಾಯಿಗಂಟು, ನರವಲು, ಅಶೋಕ ಮರ, ಪಳವಳಿಕೆ, ಕಾಡಳ್ಳು, ಹೆಗ್ಗಣದ ಮಾರಿಗೆಡ್ಡೆ, ಹಂದಿ ನೇವೆ, ತಂಬಿಟ್ಟು ಕಾರೆ, ಕಾಡು ಶುಂಠಿ, ಕರವಾದಿ, ನೊರೆ ಗೆಣಸು, ನೀರ್‌ಬೆತ್ತ, ಸೊಗದೆ ಬೇರು, ಶತಾವರಿ, ಕಹಿ ಎರಕು, ಮೀನದ ಮರ, ಮಗ್ಗಾರೆ, ಇಪ್ಪೆ, ಕೊಮೊಳ್ಳಿ, ಉದುರೆ ಅಂಬು, ಕರೆಪಂದು, ಪೇವುದಿ ಹಾಗೂ ಇನ್ನಿತರೆ ಅಪರೂಪದ ಗಿಡಗಳನ್ನು ಪ್ರದರ್ಶನ ಮಾಡಲಾಗಿತ್ತು.
ನಾವು ಇತಿಹಾಸದ ಮರಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಆದರೆ ಜೀವವೈವಿಧ್ಯಗಳು ಹುಟ್ಟುವ ಮುಂಚೆಯಿಂದಲೂ ಮರಗಳು ಅಸ್ಥಿತ್ವದಲ್ಲಿ ಇತ್ತು ಎಂಬುದನ್ನು ಈ ಕಾರ್ಯಕ್ರಮ ತಿಳಿಸಿತು. ವಿವಿಧ ಪ್ರಭೇದಗಳ ಮರಗಳನ್ನು ಉಳಿಸಲು ವಿಜ್ಞಾನಿಗಳು ಎಷ್ಟು ಶ್ರಮವಹಿಸಿದ್ದಾರೆ ಎಂಬ ಕುತೂಹಲಕಾರಿ ವಿಚಾರಗಳು ತಿಳಿಯಿತು.
-ಯಶವಂತ್, 9ನೇ ತರಗತಿ, ದೀನಬಂಧು ಶಾಲೆ
ನಾನು ಕಾಡು ಉಳಿಸುವ ಹೋರಾಟಗಳಾದ ಬಿಷ್ಣೋಯ್ ಚಳುವಳಿ, ಚಿಪ್ಕೋ ಚಳುವಳಿ ಕುರಿತು ವಿವರಣೆಯನ್ನು ನೀಡಿದೆ. ನಾವೆಲ್ಲರೂ ಗಿಡಗಳನ್ನು ಬೆಳೆಸಬೇಕು, ಮರಗಳ ಕುರಿತು ಹೆಚ್ಚು ಅಧ್ಯಯನ ಮಾಡಬೇಕು ಎಂಬುದನ್ನು ಅರಿತುಕೊಂಡೆ. ಪರಿಸರ ಸಂರಕ್ಷಣೆಯ ಮಹತ್ವ ತಿಳಿಯಿತು.
-ಅಮೃತಾ, 9ನೇ ತರಗತಿ, ದೀನಬಂಧು ಶಾಲೆ