ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಂದ ತಂದೆ ತಾಯಿಯ ಪಾದ ಪೂಜೆ ಹಾಗೂ ಪೋಷಕರಿಂದ ಮಕ್ಕಳಿಗೆ ದೀಕ್ಷೆ ಕೊಡಿಸಲಾಯಿತು.
ಗ್ರಾಮದ ಸರ್ಕಾರಿ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ಒಟ್ಟು 242 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆಯ ಮುಖ್ಯ ಗುರುಗಳಾದ ರಾಜೇಶ್ ಮನಗುಳಿ ಹಾಗ ಸಹ ಶಿಕ್ಷಕರು, ಶ್ರಾವಣದ ಕೊನೆ ಸೋಮವಾರದಂದು ಮಕ್ಕಳಿಂದ ತಂದೆ-ತಾಯಿಗಳ ಪಾದಪೂಜೆ ಮಾಡಿಸಿದ್ದಾರೆ. ಮಕ್ಕಳಿಗೆ ಆತ್ಮವಿಶ್ವಾಸದೊಂದಿಗೆ ಭರವಸೆ ಮೂಡಿಸುವ ಕಾರ್ಯ ಮಾಡಿದ್ದಾರೆ. ಶಿಕ್ಷಕರ ವಿನೂತನ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಸಹ ಸಾಥ್ ನೀಡಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಅವರಲ್ಲಿ ಹೆಚ್ಚಿನ ಪ್ರಮಾಣದ ಓದಿನ ಆಸಕ್ತಿ ಬೆಳೆಸಲು ಈ ಶಾಲೆ ಮುಂದಾಗಿದೆ. ಎಲ್ಲಾ ಮಕ್ಕಳು ಪ್ರತಿ ನಿತ್ಯ ಶಾಲೆಗೆ ಬರಬೇಕು ಪೋಷಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಥಮ ಆದ್ಯತೆ ನೀಡಬೇಕು ಆ ಮೂಲಕ ಉತ್ತಮ ಫಲಿತಾಂಶ ಪಡೆಯಬೇಕು ಅನ್ನೋ ಹಂಬಲದಿಂದ ಶಿಕ್ಷಕರು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ತಂದೆ, ತಾಯಿಗೆ ಪಾದಪೂಜೆ, ಮಕ್ಕಳಿಂದ ಪ್ರತಿಜ್ಞೆ, ಪೋಷಕರಿಂದ ದೀಕ್ಷೆ..!
ನೂರಾರು ಮಕ್ಕಳು ಸಾಮೂಹಿಕವಾಗಿ ತಮ್ಮ ತಮ್ಮ ತಂದೆ ತಾಯಿಯ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ಪೋಷಕರ ಪಾದ ತೊಳೆದು ವಿಭೂತಿ ಕುಂಕುಮ ಅರ್ಪಿಸಿ ಹೂ ಇಟ್ಟು ಉದಬತ್ತಿ ಬೆಳಗಿ ಪೂಜೆ ಮಾಡಿ, ಪವಿತ್ರ ದಿನವಾದ ಇಂದು, ನನ್ನ ಹೆತ್ತವರ ಪುಣ್ಯಪಾದಗಳನ್ನು ಮುಟ್ಟಿ ಪ್ರತಿಜ್ಞೆ ಮಾಡುವುದು ಏನೆಂದರೆ, ನಾನು ನನ್ನ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ಎಂದಿಗೂ ಶಾಲೆಗೆ ಗೈರು ಹಾಜರಾಗದೇ, ಶಾಲೆಯಲ್ಲಿ ಪೂಜ್ಯ ಗುರುಗಳಿಂದ ಪಡೆದ ಜ್ಞಾನವನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು, ಅವರು ಹೇಳಿದ ಮನೆಗೆಲಸ ಮತ್ತು ವಹಿಸಿದ ಜವಾಬ್ದಾರಿಗಳನ್ನು ಶಿರಸಾವಹಿಸಿ ಪಾಲಿಸಿ ಸಮಾಜದಲ್ಲಿ ಉತ್ತಮ ನಾಗರಿಕನಾಗಲು ಮನಃಪೂರ್ವಕವಾಗಿ ಪ್ರಯತ್ನಿಸುತ್ತೇನೆ. ನಾನು ಇನ್ನು ಮುಂದೆ ಜೀವನದಲ್ಲಿ ಎಂದಿಗೂ ದುರಭ್ಯಾಸಗಳನ್ನು ಮಾಡುವುದಿಲ್ಲ. ಸತ್ಯ,, ಅಹಿಂಸೆಗಳನ್ನು ಪಾಲಿಸುತ್ತಾ ಸನ್ಮಾರ್ಗದಲ್ಲಿ ನಡೆಯುತ್ತ ಆದರ್ಶ ವಿದ್ಯಾರ್ಥಿಯಾಗುತ್ತೇನೆ. ವಿದ್ಯಾದಾನ ಮಾಡಿದ ಗುರುಗಳಿಗೆ ಜನ್ಮ ನೀಡಿದ ಹೆತ್ತವರಿಗೆ ಕೀರ್ತಿ ತರುವ ಹಾಗೆ ಜೀವನವನ್ನು ರೂಪಿಸಿಕೊಳ್ಳುತ್ತೇನೆ.ಆ ಮೂಲಕ ನನ್ನ ಊರಿಗೆ, ನಾಡಿಗೆ ಹಾಗೂ ದೇಶಕ್ಕೆ ಹೆಸರು ತರಲು ನನ್ನ ಉಸಿರು ಇರುವವರೆಗೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಈ ಮೂಲಕ ದೃಢಸಂಕಲ್ಪ ಮಾಡುತ್ತಾ ಪ್ರತಿಜ್ಞೆ ಮಾಡುತ್ತೇನೆ ಎಂದು ಪ್ರಮಾಣ ಮಾಡಿದರು.
ಇಂತಹ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ತಂದೆ-ತಾಯಿ ಆಶೀರ್ವಾದವಿದೆ ಎಂಬ ನಂಬಿಕೆ ಮೂಡಿದೆ. ಇತ್ತ ತಂದೆ-ತಾಯಿಗಳು ಸಹ ತಮ್ಮ ತಮ್ಮ ಮಕ್ಕಳ ಓದಿನ ಬಗ್ಗೆ ಮತ್ತಷ್ಟು ಕಾಳಜಿ ವಹಿಸಲು ಸಹಕಾರಿಯಾಗಿದೆ. ಎಂದು ಶಿಕ್ಷಕರು, ಪೋಷಕರು ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದರು.