ಚಿತ್ರದುರ್ಗ: ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಸೃಜನಶೀಲತೆ ಹಾಗೂ ಜ್ಞಾನ ವೃದ್ಧಿಸಲಿದೆ ಎಂದು ಜಿಪಂ ಸಿಇಒ, ಜಿಲ್ಲಾ ಬಾಲಭವನ ಸಮಿತಿ ಅಧ್ಯಕ್ಷ ಎಸ್.ಜೆ. ಸೋಮಶೇಖರ್ ಹೇಳಿದರು.
ರಾಜ್ಯಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಗರದ ಜಿಲ್ಲಾ ಬಾಲಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಕಲಾಶ್ರೀ ಸ್ಪರ್ಧೆಗೆ ಆಯ್ಕೆ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಬಾಲಭವನ ಸಮಿತಿ ಮಕ್ಕಳಿಗಾಗಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕು. ಮುಂದಿನ ದಿನಗಳಲ್ಲಿ ಪಾಲಕರು, ಶಿಕ್ಷಕರಿಗೂ ವಿಶೇಷ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್. ಬಣಕಾರ್ ಮಾತನಾಡಿ, ರಾಜ್ಯಮಟ್ಟದ ಕಲಾಶ್ರೀ ಸ್ಪರ್ಧೆಗೆ 9ರಿಂದ 16 ವರ್ಷವಯೋಮಿಯೊಳಗಿನ ಮಕ್ಕಳನ್ನು ಆಯ್ಕೆ ಮಾಡಲು ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆಗಳನ್ನು ನಾಲ್ಕು ವಿಭಾಗಗಳಲ್ಲಿ ಹಮ್ಮಿಕೊ ಳ್ಳಲಾಗಿದೆ. 90 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಒಂದು ವಿಭಾಗದಿಂದ ಇಬ್ಬರಂತೆ ಎಂಟು ಮಕ್ಕಳನ್ನು ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದರು.
ಕಾರ‌್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ವಾಚಿಸಲಾಯಿತು. ಶಿಕ್ಷಣ ಇಲಾಖೆ ಅಧಿಕಾರಿ ವೆಂಕಟೇಶ್, ಜಿಲ್ಲಾ ನಿರೂಪಣಾಧಿಕಾರಿ ವಿಜಯ ಕುಮಾರ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಜೆ. ವೈಶಾಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎನ್. ಸುಧಾ, ವೀಣಾ, ಬಾಲಭವನ ವ್ಯವಸ್ಥಾಪಕ ಸುರೇಶ್, ಕಾರ‌್ಯಕ್ರಮ ಸಂಯೋಜಕ ಡಿ. ಶ್ರೀಕುಮಾರ ಇದ್ದರು.