ಕೆ.ಎಂ.ದೊಡ್ಡಿ: ಚಿಕ್ಕವಯಸ್ಸಿನಲ್ಲೇ ಮಕ್ಕಳಿಗೆ ಸಾಮಾಜಿಕ ಚಿಂತನೆ ಬಗ್ಗೆ ಅರಿವು ಮೂಡಿಸಬೇಕು ಎಂದು ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಹಾಗಲಹಳ್ಳಿ ಬಸವರಾಜೇಗೌಡ ಅಭಿಪ್ರಾಯಪಟ್ಟರು.
ಪ್ರಾರ್ಥನಾ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಅಲಭುಜನಹಳ್ಳಿ ರಸ್ತೆಯಲ್ಲಿರುವ ಜೆಎಂ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರಾರ್ಥನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ವಿದ್ಯೆ ಜತೆಗೆ ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವಂತೆ ಕಲಿಸುವ ಜವಾಬ್ದಾರಿ ಪೋಷಕರು ಮತ್ತು ಶಿಕ್ಷಕರ ಕರ್ತವ್ಯ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ತೆರೆದು ಗುಣಮಟ್ಟ ಮತ್ತು ಮೌಲ್ಯಧಾರಿತ ಶಿಕ್ಷಣ ನೀಡುವಲ್ಲಿ ಪ್ರಾರ್ಥನಾ ವಿದ್ಯಾ ಸಂಸ್ಥೆ ಯಶಸ್ಸು ಸಾಧಿಸಿದೆ. ಶಿಕ್ಷಣದ ಜತೆಗೆ ಕೌಶಲ ಜ್ಞಾನ ವೃದ್ಧಿಸುವ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಪೋಷಕರಿಂದ ಉತ್ತಮ ಪ್ರತಿಕ್ರಿಯೆ ದೊರತಿದೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರಾಗಿದ್ದ ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಕೆಂಪಮ್ಮ ಮಾತನಾಡಿ, ಪೋಷಕರು ಮಕ್ಕಳಿಗೆ ಒತ್ತಡ ಹಾಕುವುದನ್ನು ಬೀಡಬೇಕು. ಅವರ ಸಮ್ಮುಖದಲ್ಲಿ ಅಸಂಬದ್ಧ ಮಾತುಗಳನ್ನು ಆಡಬಾರದು ಎಂದು ಕಿವಿ ಮಾತು ಹೇಳಿದರು.
ಪೋಷಕರು ಇಂಗ್ಲಿಷ್ ಭಾಷೆಗೆ ಜೊತು ಬೀಳದೆ ಕನ್ನಡಕ್ಕೆ ಹೆಚ್ಚಿನ ಮಾನ್ಯತೆ ನೀಡಿ ನಮ್ಮ ಗ್ರಾಮೀಣ ಪ್ರದೇಶದ ಉಸಿರಾದ ಜನಪದದ ಅರಿವನ್ನು ಮಕ್ಕಳಲ್ಲಿ ಮೂಡಿಸುವ ಕೆಲಸವಾಗಬೇಕು ಎಂದರು.
ಮಕ್ಕಳಲ್ಲಿ ಕೌಶಲ್ಯ ಜ್ಞಾನ ಹೆಚ್ಚಿಸುವ ನಿಟ್ಟಿನಲ್ಲಿ ಶಿಕ್ಷಕರು ಹೆಚ್ಚಿನ ಆಸಕ್ತಿ ವಹಿಸಬೇಕು ಶೈಕ್ಷಣಿಕ ಪ್ರಗತಿಯ ಜತೆ ಸಾಮಾನ್ಯ ಜ್ಞಾನದ ಬಗ್ದಗೆ ಅರಿವು ಮೂಡಿಸಿದರೆ ಅವರ ಮುಂದಿನ ಭವಿಷ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ಪ್ರಾರ್ಥನಾ ಆವಾರ್ಡ್‌ನ್ನು ಅಣ್ಣೂರಿನ ಮೊಹೀತ್ ಎಸ್.ಗೌಡ ಅವರಿಗೆ ಸಂಸ್ಥೆಯ ಗೌರವಾಧ್ಯಕ್ಷ ಪುಟ್ಟರಾಮು ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಕಾರ್ಯದರ್ಶಿ ಪಿ.ಸೌಮ್ಯಕೃಷ್ಣ ಬಹುಮಾನ ವಿತರಿಸಿದರು. ಬಳಿಕ ವಿದ್ಯಾರ್ಥಿಗಳು ನಡೆಸಿ ಕೊಟ್ಟ ಹಲವು ವೈವಿದ್ಯಮಯ ನೃತ್ಯಗಳ ಪೋಷಕರ ಗಮನ ಸೆಳೆದವು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ರವಿಸಾವಂದಿಪುರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಿರ್ದೇಶಕರಾದ ತೊರೆಚಾಕನಹಳ್ಳಿ ಶಂಕರೇಗೌಡ, ಹಾಗಲಹಳ್ಳಿ ಬಸವರಾಜು, ವೈ.ಬಿ.ಶ್ರೀಕಂಠಸ್ವಾಮಿ, ಪುಟ್ಟಸ್ವಾಮಿ, ರಘುವೆಂಕಟೇಗೌಡ ಸೇರಿದಂತೆ ಶಾಲೆಯ ಶಿಕ್ಷಕರು ಹಾಜರಿದ್ದರು.