ಹಗರಿಬೊಮ್ಮನಹಳ್ಳಿ: ಸ್ವಾರ್ಥವೇ ತುಂಬಿರುವ ಸಮಾಜದಲ್ಲಿ ನಿಸ್ವಾರ್ಥ ಸೇವೆ ಮಾಡುವಂತಹವರು ಬೆರಳೆಣಿಕೆಯಷ್ಟು ಜನರು ಸಿಗುತ್ತಾರೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಉಮಾಪತಿ ಶೆಟ್ಟರ್ ಹೇಳಿದರು.
ಹಂಪಾಪಟ್ಟಣ ಗ್ರಾಮದಲ್ಲಿ ಜನಸೇವಾ ಟ್ರಸ್ಟ್ ಹಾಗೂ ನವೋದಯ ಯುವಕ ಸಂಘದಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಪ್ರತಿಯೊಬ್ಬರೂ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕ ಘನತೆ ಮತ್ತು ಗೌರವ ಪಡೆಯಬಹುದು. ಮಕ್ಕಳಲ್ಲಿ ವಿದ್ಯೆ, ಸಂಸ್ಕಾರ, ಮಾನವೀಯತೆ ಗುಣಗಳನ್ನು ಬೆಳೆಸಬೇಕು. ದುಶ್ಚಟಗಳಿಗೆ ಬಲಿಯಾಗದಂತೆ, ಮೊಬೈಲ್ ದಾಸರಾಗದಂತೆ ನೋಡಿಕೊಳ್ಳಬೇಕು ಎಂದರು.
ಟ್ರಸ್ಟ್ ಅಧ್ಯಕ್ಷ ಬುಡ್ಡಿ ಬಸವರಾಜ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಹೊಟ್ಟೆಯ ಹಸಿವಿಗಿಂತ ನೆತ್ತಿಯ ಹಸಿವು ಹೆಚ್ಚಿರಬೇಕು. ಗ್ರಾಮದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕು. ಮಕ್ಕಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಪಾಲಕರು ಅನೇಕ ತ್ಯಾಗ ಮಾಡುತ್ತಾರೆ. ಪಾಲಕರು ಕಂಡ ಕನಸು ನನಸು ಮಾಡಬೇಕು ಎಂದರು.
ಪತ್ರಕರ್ತ ಸಿ.ಶಿವಾನಂದ ಮಾತನಾಡಿ, ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳು ಪಟ್ಟಣದ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ಮಾಡುವುದು ಕಷ್ಟದ ಕೆಲಸ. ಆದರೂ ಸರ್ಕಾರ ನೀಡುವ ಸೌಲಭ್ಯಗಳು, ಸಂಘ-ಸಂಸ್ಥೆಗಳು ನೀಡುವ ಪ್ರೋತ್ಸಾಹದಿಂದ ಮುಂದೆ ಬರಬೇಕು. ಗ್ರಾಮದಲ್ಲಿ ಪಿಯು ಕಾಲೇಜ್ ಹಾಗೂ ಆರೋಗ್ಯ ಕೇಂದ್ರ ಆರಂಭಕ್ಕೆ ಪ್ರಯತ್ನಿಸಬೇಕೆಂದರು.
ಯಡ್ರಾಮ್ಮನಹಳ್ಳಿಯ ಸಿಳ್ಳೆಕ್ಯಾತರ ನಿಂಗಪ್ಪ ತಂಡದಿಂದ ತೊಗಲಗೊಂಬೆ ಪ್ರದರ್ಶನ ನಡೆಯಿತು. ಮಹಾಂತೇಶ್ ಮತ್ತು ತಂಡದವರು ಜಾನಪದ ಮತ್ತು ಕ್ರಾಂತಿಗೀತೆಗಳನ್ನು ಹಾಡಿದರು. ಗ್ರಾಮದ ಕೂಲಿ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಮಂಜುನಾಥ ಪಟ್ಟಣಶೆಟ್ಟಿ, ವಿಶ್ವನಾಥ ಬಾವಿಕಟ್ಟಿ, ರಾಜಾವಲಿ ಗಡ್ಡದ್, ಅಶೋಕ್ ಉಪ್ಪಾರ್, ಅಕಂಡಿ ಬಸವರಾಜ್, ಡಿ.ಭೀಮರಾಜ್, ವೀರೇಶ್ ಮಜ್ಗಿ, ಬಿ.ಕೆ.ಬಸವರಾಜ, ಲಿಂಗರಾಜ ಯಾದವ್, ಎ.ಕೇಶವಮೂರ್ತಿ, ಭಂಟರ ಕುಬೇರ, ಕೆ.ಮಲ್ಲಿಕಾರ್ಜುನ, ಯಲ್ಲಪ್ಪ, ಭಜಂತ್ರಿ ಸೋಮಶೇಖರ ಇತರರಿದ್ದರು.