ಅರಸೀಕೆರೆ ಗ್ರಾಮಾಂತರ: ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ, ವ್ಯಾಪಾರ ಕೌಶಲವನ್ನು ವೃದ್ಧಿಸುವ ಹಾಗೂ ಅಡುಗೆ ಮಾಡುವ ಬಗ್ಗೆ ಪ್ರಾಯೋಗಿಕ ತಿಳಿವಳಿಕೆ ಮೂಡಿಸಲು ಆಹಾರ ಮೇಳ ಸಹಕಾರಿಯಾಗಿದೆ ಎಂದು ಗುರುಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ರವಿಶಂಕರ್ ತಿಳಿಸಿದರು.
ತಾಲೂಕಿನ ಬಾಣಾವರ ಸಮೀಪದಲ್ಲಿರುವ ಗುರುಕುಲ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಗುರುವಾರ ನಡೆದ ಆಹಾರಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಆಹಾರ ಮೇಳದಲ್ಲಿ ಭಾಗವಹಿಸುವ ಮಕ್ಕಳಿಗೆ ವ್ಯಾಪಾರ, ವ್ಯವಹಾರ ಕೌಶಲ ಬೆಳೆಯುವ ಜತೆಗೆ ಜತೆಗೆ ತರಕಾರಿ ಹಾಗೂ ಅಡುಗೆ ಪದಾರ್ಥಗಳಲ್ಲಿ ವಿಶೇಷ ಆಸಕ್ತಿ ಮೂಡಿಸಲು ಆಹಾರಮೇಳ ಸಹಕಾರಿಯಾಗಲಿದೆ ಎಂದರು.
ಆಹಾರ ಮೇಳದಲ್ಲಿ ಸಂಭ್ರಮದಿಂದ ಪಾಲ್ಗೊಂಡ ಮಕ್ಕಳು ಪಠ್ಯದ ಹೊರತಾದ ಹೊಸದೊಂದು ಅನುಭವವನ್ನು ಪಡೆದುಕೊಂಡರು. ಪ್ರತಿದಿನ ತರಗತಿಯಲ್ಲಿ ಕುಳಿತು ಪಾಠ ಪ್ರವಚನಕಷ್ಟೇ ಸೀಮಿತವಾಗಿದ್ದ ಮಕ್ಕಳು ತಾವೇ ಕೈಯಾರೆ ತಯಾರಿಸಿದ ಆಹಾರ ಖಾದ್ಯಗಳನ್ನು ಮಾರಾಟ ಮಾಡುತ್ತಿದ್ದರು. ಆಹಾರ ಮೇಳಕ್ಕೆ ಬಂದ ಗ್ರಾಹಕರ ಮನವೊಲಿಸಿ ತಾವು ತಯಾರಿಸಿದ್ದ ತಿಂಡಿ ತಿನಿಸುಗಳನ್ನು ಮಾರಾಟ ಮಾಡಿದ ಮಂದಹಾಸ ಕಾಣಿಸಿತು.
ಆಹಾರ ಮೇಳದಲ್ಲಿ ಪಾನಿಪುರಿ ಗೋಲ್‌ಗಪ್ಪ, ಚರುಮುರಿ, ಫ್ರೂಟ್ ಸಲಾಡ್, ಮಜ್ಜಿಗೆ, ವಿಧವಿಧ ಸಿಹಿ ತಿನಿಸುಗಳನ್ನು ಮಕ್ಕಳೇ ತಯಾರಿಸಿದ್ದರು. ಗುರುಕುಲ ಶಿಕ್ಷಣ ಸಂಸ್ಥೆಯ ಖಜಾಂಚಿ ಶ್ರೀನಾಥ್, ಪ್ರಾಂಶುಪಾಲ ವಿಶ್ವನಾಥ್ ಹಾಗೂ ಶಿಕ್ಷಕರು ಭಾಗವಹಿಸಿದ್ದರು.