ಜಿಲ್ಲೆ

ಮಕ್ಕಳಲ್ಲಿ ರಾಷ್ಟ್ರಪ್ರೇಮ, ಸಂಸ್ಕಾರ ಬೆಳೆಸಿ

ಚಿತ್ರದುರ್ಗ: ಪ್ರತಿ ಮಕ್ಕಳಲ್ಲೂ ರಾಷ್ಟ್ರಪ್ರೇಮ, ಸಂಸ್ಕಾರ ಬೆಳೆಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ತರಾಸು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಶಿಕ್ಷಣ ಇಲಾಖೆಯಿಂದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ, ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಶಿಕ್ಷಣದ ಜೊತೆಗೆ ಅವರ ಭವಿಷ್ಯದ ಕುರಿತು ಕಾಳಜಿವಹಿಸಿ ಮಾರ್ಗದರ್ಶಿಗಳಾಗಿ ನಿಲ್ಲುವವರು ಶಿಕ್ಷಕರಾಗಿದ್ದಾರೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು. ಅವರ ಜ್ಞಾನವನ್ನು ಮಕ್ಕಳಿಗೆ ಧಾರೆ ಎರೆದರು. ಮುಂದೆ ಉಪರಾಷ್ಟ್ರಪತಿ, ರಾಷ್ಟ್ರಪತಿಯಾಗಿ ಕೀರ್ತಿ ಹೊಂದಿದ್ದು, ಇತಿಹಾಸ ಪುಟ ಸೇರಿದೆ. ಆದ್ದರಿಂದ ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನು ಬೇಕಾದರು ಸಾಧಿಸಬಹುದು ಎಂಬುದಕ್ಕೆ ಅವರೇ ಸಾಕ್ಷಿ. ಗುರುವಿನ ಸ್ಥಾನ ಅತ್ಯಂತ ಅಮೂಲ್ಯವಾಗಿದ್ದು, ಶ್ರೇಷ್ಠರಾಗಿದ್ದಾರೆ ಎಂದು ಬಣ್ಣಿಸಿದರು.

ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯದಲ್ಲೇ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಮುಂದಿನ ವರ್ಷವು ಉತ್ತಮ ಫಲಿತಾಂಶ ತಂದುಕೊಡಲು ಶಿಕ್ಷಕರೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ, ಎಲ್ಲರನ್ನೂ ಸಮಾನವಾಗಿ ಕಾಣುವುದು ಶಿಕ್ಷಕರಿಗೆ ಮಾತ್ರ ಸಾಧ್ಯ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದರೆ ದೇಶದ ಭವಿಷ್ಯ ರೂಪಿಸುವ ದೊಡ್ಡ ಶಕ್ತ್ತಿಗಳಾಗಿ ರೂಪುಗೊಳ್ಳುತ್ತಾರೆ. ಆ ನಿಟ್ಟಿನಲ್ಲಿ ತಯಾರು ಮಾಡಿ ಎಂದು ಸಲಹೆ ನೀಡಿದರು.

ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಹೆಚ್ಚ್ತಿದೆ. ಗುರುವಿನಲ್ಲೇ ದೇವರನ್ನು ಕಾಣುವ ದೇಶ ಭಾರತ. ಭವಿಷ್ಯಕ್ಕೆ ದಾರಿದೀಪವಾಗುವ ಶಿಕ್ಷಕರನ್ನು ಮಾತ್ರ ಬದುಕಿನುದ್ದಕ್ಕೂ ನೆನಪಿಸಿಕೊಳ್ಳಲು ಸಾಧ್ಯ ಎಂದರು.

ಜಿಲ್ಲಾಧಿಕಾರಿ ಜಿ.ಆರ್.ಜೆ.ದಿವ್ಯಾಪ್ರಭು ಮಾತನಾಡಿ, ಶಿಕ್ಷಕರ ಸಹಕಾರದಿಂದಲೇ ಭಾರತ ಸಧೃಢವಾಗುತ್ತಿದೆ. ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದರೆ ದೇಶದ ದಿಕ್ಕೇ ಬದಲಾಗಲಿದೆ. ಗುರುವಿಲ್ಲದೆ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇದೇ ವೇಳೆ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ, ವಿಶೇಷ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ ನೀಲಕಂಠೇಶ್ವರ ಸ್ವಾಮಿ ದೇಗುಲದಿಂದ ತರಾಸು ರಂಗಮಂದಿರವರೆಗೂ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಸಿಟಿಇ ಪ್ರಾಚಾರ್ಯೆ ಟಿ.ಜಿ.ಲೀಲಾವತಿ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಟಿ.ತಿಮ್ಮಾರೆಡ್ಡಿ, ಡಿಡಿಪಿಐ ಕೆ.ರವಿಶಂಕರ್‌ರೆಡ್ಡಿ, ಡಯಟ್ ಉಪನಿರ್ದೇಶಕ ಎಂ.ನಾಸೀರ್ ಉದ್ದೀನ್, ಬಿಇಒ ಎಸ್.ನಾಗಭೂಷಣ್ ಇತರರಿದ್ದರು.