ಸಾಗರ: ಮಕ್ಕಳಲ್ಲಿ ರಂಗಭೂಮಿ ಕುರಿತು ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಪಠ್ಯದ ಜತೆಗೆ ಬದುಕಿನ ಪಾಠ ಹೇಳಿಕೊಡುವ ರಂಗಭೂಮಿ ಬಗ್ಗೆ ಶಿಕ್ಷಕರು, ಪಾಲಕರು ಮಕ್ಕಳಲ್ಲಿ ಅಭಿರುಚಿ ಮೂಡಿಸಬೇಕು ಎಂದು ಹಸೆಚಿತ್ರ ಕಲಾವಿದೆ ಗೌರಮ್ಮ ಹೇಳಿದರು.
ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಶನಿವಾರ ಸ್ಪಂದನಾ ಸಂಸ್ಥೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸರ್ಕಾರಿ ಶಾಲಾ ಮಕ್ಕಳ ನಾಟಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದ ಮೂಲಕ ಹೇಳಿಕೊಡಲು ಸಾಧ್ಯವಾಗದ ಅನೇಕ ಅಂಶಗಳನ್ನು ರಂಗಭೂಮಿ ಮೂಲಕ ಮಕ್ಕಳಿಗೆ ಮನಮುಟ್ಟುವಂತೆ ಹೇಳಲು ಅವಕಾಶವಿದೆ. ಇಂತಹ ಸ್ಪರ್ಧೆಗಳು ಮಕ್ಕಳಲ್ಲಿರುವ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಲು ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತದೆ. ಅದರಲ್ಲಿಯೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಸ್ಪರ್ಧೆಗಳು ಹೆಚ್ಚು ಉತ್ತೇಜನ ನೀಡುತ್ತದೆ ಎಂದು ತಿಳಿಸಿದರು.
ಸ್ಪಂದನಾ ಸಂಸ್ಥೆ ಮುಖ್ಯಸ್ಥೆ ಎಂ.ವಿ.ಪ್ರತಿಭಾ ಮಾತನಾಡಿ, ರಂಗಭೂಮಿ ಚಟುವಟಿಕೆ ಹರಿಯುತ್ತಿರುವ ನೀರು ಇದ್ದಂತೆ. ಹೊಸ ಹೊಸ ವಿಷಯಗಳನ್ನು ಅಳವಡಿಸಿಕೊಂಡು ರಂಗಭೂಮಿ ಹೆಮ್ಮರವಾಗಿ ಬೆಳೆಯುತ್ತಿದೆ. ಸರ್ಕಾರಿ ಶಾಲಾ ಮಕ್ಕಳನ್ನು ರಂಗಭೂಮಿಯಲ್ಲಿ ತೊಡಗಿಸಬೇಕೆನ್ನುವ ಉದ್ದೇಶದಿಂದ ಈ ಸ್ಪರ್ಧೆ ಆಯೋಜಿಸಿದ್ದರೂ ಇದರ ಹಿಂದೆ ರಂಗಭೂಮಿ ಚಟುವಟಿಕೆ ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಸದುದ್ದೇಶವಿದೆ. ಸ್ಪರ್ಧೆಯಲ್ಲಿ 8 ಶಾಲೆಗಳಿಂದ 200ಕ್ಕೂ ಹೆಚ್ಚು ಮಕ್ಕಳು, ಶಿಕ್ಷಕರು ಪಾಲ್ಗೊಂಡಿದ್ದಾರೆ. ಇವರ ಮೂಲಕ ರಂಗಭೂಮಿ ಸಂಸ್ಕೃತಿ ಬೆಳೆಯುತ್ತದೆ ಎನ್ನುವ ವಿಶ್ವಾಸವಿದೆ ಎಂದರು.
ಮಕ್ಕಳು ಪ್ರದರ್ಶಿಸಿದ ನಾಟಕ ಎಲ್ಲರ ಗಮನ ಸೆಳೆಯಿತು.