ಜಿಲ್ಲೆ

ಮಕ್ಕಳಲ್ಲಿ ಪ್ರಜ್ಞಾವಂತಿಕೆ ಬೆಳೆಸಬೇಕಿದೆ

ಬಸವಕಲ್ಯಾಣ: ಮಕ್ಕಳಲ್ಲಿ ವಿದ್ಯಾವಂತಿಕೆ, ಬುದ್ಧಿವಂತಿಕೆಗಿಂತ ಪ್ರಜ್ಞಾವಂತಿಕೆ ಬೆಳೆಸಬೇಕಿದೆ. ಬಸವಣ್ಣನವರ ತತ್ವ-ಸಂದೇಶ ಅರಿತು ಅಳವಡಿಕೊಂಡರೆ ಪ್ರಜ್ಞಾವಂತಿಗೆ ಬೆಳೆಯುತ್ತದೆ ಎಂದು ಅಂತಾರಾಷ್ಟ್ರೀಯ ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್ ಹೇಳಿದರು.

ನಗರದ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ, ಹುತಾತ್ಮ ದಿನಾಚರಣೆಯಲ್ಲಿ ಬುಧವಾರ ಆಯೋಜಿಸಿದ್ದ ಅಂಧಶ್ರದ್ಧೆ ನಿವಾರಣೆಗೆ ವಚನದ ನೆಲೆಗಳು ಗೋಷ್ಠಿಯಲ್ಲಿ ಪವಾಡದ ಹೆಸರಿನಲ್ಲಿ ನಡೆವ ಮೋಸ ಬಯಲು ಮಾಡಿ ಮಾತನಾಡಿದರು.

ಮಾಟ, ಮಂತ್ರ, ವಾಸ್ತು ಏನು ಇಲ್ಲ. ಇದರ ಹೆಸರಿನಲ್ಲಿ ಮಾಸ ಮಾಡುವರು ಇದ್ದಾರೆ. ಮೋಸ ಹೋಗುತ್ತಲೇ ಇದ್ದೇವೆ. ಇಂದಿನ ಸಮಾಜದಲ್ಲಿ ಜ್ಯೋತಿಷ್ಯದ ಹೆಸರಲ್ಲಿ ಹಾಗೂ ನಿಧಿ ಹುಡುಕುವ ನೆಪದಲ್ಲಿ ಜನರನ್ನು ವಂಚಿಸಲಾಗುತ್ತಿದೆ. ತೆಂಗಿನಲ್ಲಿ ಚಿನ್ನದ ಸರ, ಕೈಯಲ್ಲಿ ಬೆಂಕಿ ಹೇಗೆ ಬರುತ್ತವೆ ಎನ್ನುವುದನ್ನು ಪ್ರಾಯೋಗಿಕವಾಗಿ ತೋರಿಸಿ, ಅರಿವು ಮೈಗೂಡಿಸಿಕೊಳ್ಳಿ, ಕೆಟ್ಟ ಸಿನಿಮಾದಿಂದ ಮಕ್ಕಳನ್ನು ದೂರವಿಡಿ ಎಂದು ಹೇಳಿದರು.

ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ, ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಆಶೀರ್ವಚನ ನೀಡಿದರು. ಮುಖಂಡ ಪ್ರದೀಪ ವಾತಡೆ ಮಾತನಾಡಿದರು. ಖಾಜಾ ಮಿಸ್ಬಾಹ್ ಉಲ್ಲ ಹಸನ್ ಜಾಗೀರದಾರ್ ನೇತೃತ್ವ ವಹಿಸಿದ್ದರು. ಬಿಡಿಪಿಸಿ ನಿರ್ದೇಶಕ ಸುಭಾಷ ಹೊಳಕುಂದೆ ಅಧ್ಯಕ್ಷತೆ ವಹಿಸಿದ್ದರು.

ಬಿಡಿಪಿಸಿ ನಿರ್ದೇಶಕ ಅಶೋಕ ನಾಗರಾಳೆ, ಪ್ರದೀಪ ವಾತಡೆ, ತಹಸೀನ ಅಲಿ ಜಮಾದಾರ, ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ, ಕಂಟೆಪ್ಪ ದಾನಾ, ಚನ್ನಬಸವಪ್ಪ ವಡ್ಡನಕೇರೆ, ಮಡಿವಾಳಯ್ಯ ಸ್ವಾಮಿ, ಜಗನ್ನಾಥ ಶಾಶೆಟ್ಟಿ, ವಿಜಯಲಕ್ಷ್ಮೀ ಪಾಟೀಲ್, ವಿದ್ಯಾವತಿ ಬಿರಾದಾರ, ಪ್ರವೀಣ ಮಲಶೆಟ್ಟಿ ಇತರರಿದ್ದರು. ನಗರಸಭೆ ಮಾಜಿ ಸದಸ್ಯ ರವೀಂದ್ರ ಕೊಳಕೂರ ಸ್ವಾಗತಿಸಿದರು. ಮಹೇಶ ಸುಂಟನೂರೆ ನಿರೂಪಣೆ ಮಾಡಿದರು.