ಜಿಲ್ಲೆ

ಮಕ್ಕಳಲ್ಲಿ ಪರಿಸರ ಜಾಗೃತಿ ಅಗತ್ಯ

ವಿಜಯವಾಣಿ ಸುದ್ದಿಜಾಲ ಧಾರವಾಡ
ಪರಿಸರದ ಜತೆಗೆ ಇದ್ದಾಗ ಮಾತ್ರ ಮನುಷ್ಯತ್ವಕ್ಕೆ ಬೆಲೆ ಸಿಗಲಿದೆ. ಆದರೆ ಇಂದಿನ ದಿನಗಳಲ್ಲಿ ನಾವೆಲ್ಲ ಪರಿಸರದಿಂದ ದೂರ ಸರಿಯುತ್ತಿರುವುದು ಬೇಸರದ ಸಂಗತಿ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘ, ಇಕೋ ವಾಚ್, ಬಾಲಬಳಗ ಸೃಜನಶೀಲ ಶಿಕ್ಷಣ ಪ್ರತಿಷ್ಠಾನ ವತಿಯಿಂದ ಸಂಘದ ಸಭಾಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಮಕ್ಕಳ ನಡಿಗೆ ಹಸಿರಿನ ಕಡೆಗೆ ಒಂದು ದಿನದ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲು ಅರಣ್ಯ ಇಲಾಖೆ ಜತೆಗೆ ಸೇರಿ ಶಾಲಾ ಆವರಣದಲ್ಲಿ 50 ಲಕ್ಷ ಸಸಿ ನೆಡುವ ಯೋಜನೆ ಹಾಕಿಕೊಳ್ಳಲಾಗಿದೆ. ರಾಜ್ಯದ 77 ಸಾವಿರ ಶಾಲೆಗಳಲ್ಲಿ 1.20 ಕೋಟಿ ಮಕ್ಕಳಿ (1ರಿಂದ 12ನೇ ತರಗತಿ)ಗೆ ಶಿಕ್ಷಣ ನೀಡಬೇಕಿದೆ. ಹೀಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸೇರಿ ಅನೇಕ ಸವಾಲುಗಳು ನಮ್ಮೆದುರಿಗಿವೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಶೀಘ್ರದಲ್ಲೇ ಪರಿಹಾರ ನೀಡಲಾಗುವುದು. ಈ ಕ್ಷೇತ್ರದವರು ಸಂಬಳಕ್ಕೆ ಕೆಲಸ ಮಾಡದೆ ಮಕ್ಕಳ ಉನ್ನತಿಗೆ ಕೆಲಸ ಮಾಡಬೇಕು ಎಂದರು.
ನಮ್ಮ ತಂದೆ ಮುಖ್ಯಮಂತ್ರಿಯಾಗಿದ್ದಾಗ ಮಕ್ಕಳನ್ನು ಶಾಲೆಗೆ ಕರೆತರಲು, ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ನಿತ್ಯ ಶಾಲೆಗೆ ಹಾಜರಾಗುವ ವಿದ್ಯಾರ್ಥಿಗೆ ದಿನಕ್ಕೆ 1 ರೂ.ನೀಡುವ ಅಕ್ಷಯ ಯೋಜನೆ ಜಾರಿಗೊಳಿಸಿದ್ದರು. ಈಗ ಅದು ಬಿಸಿಯೂಟ, ಸೈಕಲ್ ವಿತರಣೆ ಸೇರಿ ಬೇರೆ ಬೇರೆ ಸ್ವರೂಪ ಪಡೆದಿದೆ. ಮಕ್ಕಳು ಸನ್ಮಾರ್ಗದಲ್ಲಿ ನಡೆದರಷ್ಟೇ ದೇಶದ ಉನ್ನತಿ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ನಾವು ಸಾಕಷ್ಟು ಹಿಂದಿದ್ದೇವೆ. ಇನ್ನು 2 ವರ್ಷ ಸಮಯ ನೀಡಿದರೆ, ಮಕ್ಕಳ ಭವಿಷ್ಯ ಸುಭದ್ರಗೊಳಿಸುವ ಕೆಲಸ ಮಾಡುವುದಾಗಿ ಹೇಳಿದರು.
ಶಾಸಕ ಎನ್.ಎಚ್. ಕೋನರೆಡ್ಡಿ ಮಾತನಾಡಿ, ಇಂದಿನ ಮಕ್ಕಳಿಗೆ ಕೃಷಿ, ಪರಿಸರದ ಜ್ಞಾನವೇ ಇಲ್ಲ. ಹಣ್ಣುಗಳ ಬಗ್ಗೆ ಅರಿವೂ ಇಲ್ಲ. ಹೀಗಾಗಿ ಪ್ರತಿ ಶಾಲೆ ಆವರಣದಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸುವುದರ ಜತೆಗೆ ಪರಿಸರ ಮಾಹಿತಿ ಜತೆಗೆ ಸ್ವಾದಿಷ್ಟ ಹಣ್ಣಿನ ಸವಿಯೂ ಸಿಗಲಿದೆ. ಇಂದಿನ ದಿನಮಾನದಲ್ಲಿ ಹಸಿರಿನ ಕಡೆ ಮಕ್ಕಳು ಹೋಗಲೇಬೇಕಾದ ಅನಿವಾರ್ಯ ಸೃಷ್ಟಿಯಾಗಿದ್ದು, ಕೃಷಿ ಅರಿವು ಅತೀ ಅವಶ್ಯಕ ಎಂದರು.
ಅಧ್ಯಕ್ಷತೆ ವಹಿಸಿದ್ದ ಸುರೇಶ ಹೆಬ್ಳೀಕರ ಮಾತನಾಡಿ, ಕೌಶಲಗಳ ಅಭಿವೃದ್ಧಿಯಾಗುವ ಶಿಕ್ಷಣ ಜಾರಿಗೆ ತರಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಸ್ವಲ್ಪವಾದರೂ ಬದಲಾವಣೆ ಮಾಡುವ ಕುರಿತು ಸಚಿವರು ಚಿಂತನೆ ನಡೆಸಬೇಕು ಎಂದರು.
ಶಿಕ್ಷಣ ತಜ್ಞ ಡಾ. ಸಂಜೀವ ಕುಲಕರ್ಣಿ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಮಮತಾ ನಾಯ್ಕ, ಗಜಾನನ ಮನ್ನಿಕೇರಿ, ಜಯಶ್ರೀ ಶಿಂತ್ರಿ, ಬಿ.ಕೆ.ಎಸ್. ವರ್ಧನ, ವಿವಿಧ ಶಾಲೆ ವಿದ್ಯಾರ್ಥಿಗಳು, ಇಲಾಖೆ ಅಧಿಕಾರಿಗಳು, ಇತರರು ಇದ್ದರು.
ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.

2 ದಿನಗಳಲ್ಲಿ ಆದೇಶಮಕ್ಕಳಲ್ಲಿ ಸಂವಿಧಾನದ ಅರಿವು ಮೂಡಿಸಲು ಶಾಲೆಯಲ್ಲಿ ಭಾರತ ಸಂವಿಧಾನದ ಪ್ರಸ್ತಾವನೆ ಓದು ಕಡ್ಡಾಯ ಮಾಡಲಾಗುವುದು. ಸಂವಿಧಾನದ ಅರಿವು ಅತೀ ಅವಶ್ಯಕ. ಅದರಲ್ಲೂ ಮಕ್ಕಳಿಗೆ ಈ ಜ್ಞಾನ ನೀಡಲು ಯೋಜನೆ ರೂಪಿಸಲಾಗಿದೆ. ಸೆ. 5ರಿಂದ ಈ ಕೆಲಸ ಆರಂಭವಾಗಲಿದೆ. ಇನ್ನು 2-3 ದಿನಗಳಲ್ಲಿ ಇಲಾಖೆ ಅಧಿಕೃತ ಆದೇಶ ಹೊರಡಿಸಲಿದೆ.*ಮಧು ಬಂಗಾರಪ್ಪ, ಸಚಿವ