ಜಿಲ್ಲೆ

ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಅರಿವು ಮೂಡಿಸಿ:ಶಾಸಕ ಪ್ರೀತಂ ಜೆ.ಗೌಡ

 ಹಾಸನ: ನಮ್ಮ ಮಣ್ಣಿನ ಗುಣ ಎಂದರೆ ಕುಟುಂಬವನ್ನು ಜೊತೆ ಕೊಂಡೊಯ್ಯುವುದು. ಆ ಕಾರ್ಯ ಮಾಡುವವರು ಮಹಿಳೆಯರು ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.

ನಗರದ ಬಿಇಒ ಕಚೇರಿ ಆವರಣದಲ್ಲಿರುವ ಗುರುಭವನದಲ್ಲಿ ಜಿಲ್ಲಾ ಸರಕಾರಿ, ಅರೆ ಸರಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ಜಿಲ್ಲಾ ರಾಜ್ಯ ಸರಕಾರಿ ನೌಕರರ ಕೋ-ಆಪರೇಟರ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತೀಯ ಸಂಸ್ಕೃತಿ ಮತ್ತು ದೇವರಲ್ಲಿ ಭಕ್ತಿಯನ್ನು ಮಕ್ಕಳಿಂದಲೇ ಬೆಳೆಸಿ ಮುಂದಿನ ಪೀಳಿಗೆಯಲ್ಲೂ ಗುರು-ಹಿರಿಯರಿಗೆ ಗೌರವ ಕೊಡುವ ಕೆಲಸವಾಗಬೇಕು. ಮಹಿಳೆಯರನ್ನು ದೇವರ ರೂಪದಲ್ಲಿ ಕಾಣುವ ನಮ್ಮ ಸಂಸ್ಕೃತಿಯಲ್ಲಿ ತಮ್ಮ ನೋವನ್ನು ಬದಿಗಿಟ್ಟು ಕುಟುಂಬದ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಹೊರುವ ಅವರ ಕಾರ್ಯ ಶ್ಲಾಘನೀಯ ಎಂದರು.

ಮುಗ್ಧ ಮನಸ್ಸನ್ನು ಹೊಂದಿರುವ ಹೆಣ್ಣು ಸಮಾಜದ ಕಣ್ಣು ಎಂದ ಅವರು, ಕುಟುಂಬದಲ್ಲಿ ಎಲ್ಲವನ್ನೂ ಒಗ್ಗೂಡಿಸಿಕೊಂಡು ಹೋಗುವ ಗುಣ ಹೊಂದಿರುವ ಮಹಿಳೆಯರು

ಈ ಮಣ್ಣಿನ ಗುಣಕ್ಕೆ ಅನುಗುಣವಾಗಿ ಕುಟುಂಬವನ್ನು ಜೊತೆಗೆ ತೆದುಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಎಂದರು.

ತಮ್ಮತನ ಬಿಟ್ಟು ವಿದೇಶಿ ಜೀವನ ಶೈಲಿ ಅಳವಡಿಸಿಕೊಳ್ಳಲು ಮುಂದಾದರೆ ಬಹುದೊಡ್ಡ ದುರಂತ ಎದುರಾಗಲಿದೆ ಎಂದು ಕಿವಿಮಾತು ಹೇಳಿದರು. ವಿದೇಶಿಗರೇ ಪ್ರಸ್ತುತದಲ್ಲಿ ಭಾರತದ ಸಂಸ್ಕೃತಿ ಹಾಗೂ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದು, ಹೀಗಾಗಿ ನಮ್ಮ ದೇಶವನ್ನು ಇತರೆ ದೇಶಗಳು ತಿರುಗಿ ನೋಡುತ್ತಿವೆ. ಮುಂದಿನ ಪೀಳಿಗೆಗೆ ಗುರು ಹಿರಿಯರಿಗೆ ಗೌರವ ನೀಡಿ, ದೇವರ ಬಗ್ಗೆ ಭಯ, ಭಕ್ತಿ ಮುಂದುವರೆಸಲು ತಾಯಿ ಮಗುವಿಗೆ ಹೆಚ್ಚು ಸಮಯ ನೀಡಿ ಇದರ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕೊರೊನಾ ವೇಳೆ ಯಾವುದನ್ನು ಲೆಕ್ಕಿಸದೇ ಕಾರ್ಯನಿರ್ವಹಿಸಿದ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ರಾಜ್ಯ ಸರಕಾರಿ ನೌಕರರ ಕೋ-ಆಪರೇಟರ್ ಸೊಸೈಟಿ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್, ಡಯಟ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲರಾದ ಹೆಚ್.ಕೆ. ಪುಷ್ಪಲತಾ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಡಾ.ಬಿ. ಸಂಧ್ಯಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷೆ ಡಿ.ಎನ್. ದಾಕ್ಷಾಯಿಣಿ, ಆಯುರ್ವೇದ ತಜ್ಞ ವೈದ್ಯರಾದ ಡಾ.ಅಶ್ವಿನಿ ಧನಪಾಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನ್ಯಾಸಕರ ಸಂಘದ ಅಧ್ಯಕ್ಷ ಹೆಚ್.ಟಿ. ಸುರೇಶ್, ಶಿಕ್ಷಕಿ ವೇದಾವತಿ, ಪರಮೇಶ್, ಯಶೋಧರ, ಕೆ.ಎಸ್. ಬಸವರಾಜ್, ಸೋಮಣ್ಣಯ್ಯ, ವರದರಾಜು ಇತರಿದ್ದರು.