ವಿಜಯವಾಣಿ ಸುದ್ದಿಜಾಲ ಧಾರವಾಡ
ಇಂದಿನ ಮಕ್ಕಳಲ್ಲಿ ದೇಶಭಕ್ತಿಯ ಬೀಜವನ್ನು ಬಿತ್ತಬೇಕಾಗಿದೆ. ಮಕ್ಕಳಿಗೆ ಸ್ವಾತಂತ್ರೃ ಹೋರಾಟದ ಇತಿಹಾಸ ತಿಳಿಸಬೇಕು ಎಂದು ಪವನ ಸಮೂಹ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ರತ್ನಾ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಲಾ ಮಂಟಪವು ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೆ ಶುಕ್ರವಾರ ಆಯೋಜಿಸಿದ್ದ ಧಾರವಾಡದ ಕವಿಗಳೇ ಬರೆದಿರುವ ದೇಶಭಕ್ತಿ ಗೀತೆಗಳ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡದ ಕವಿಗಳು ರಾಷ್ಟ್ರದಲ್ಲಿ ಹೆಸರು ಮಾಡಿದವರು. ಅವರ ರಚನೆಗಳನ್ನು ಮಕ್ಕಳು ಹಾಡಿ ಪ್ರಸ್ತುತಪಡಿಸಿದ್ದು ಮನಸ್ಸಿಗೆ ಮುದ ನೀಡಿದೆ. ಸಂಗೀತಕ್ಕೆ ಸರ್ವರೋಗ ಗುಣಪಡಿಸುವ ಶಕ್ತಿ ಇದೆ. ಇಂದಿನ ಮಕ್ಕಳೇ ನಾಳಿನ ದೇಶದ ಭವಿಷ್ಯ ಆಗಿರುವುದರಿಂದ ಮಕ್ಕಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢಗೊಳಿಸಬೇಕಿದೆ ಎಂದರು.
ಚಂದ್ರಶೇಖರ ಅಮಿನಗಡ ಮಾತನಾಡಿ, ಶಿಕ್ಷಣದಲ್ಲಿ ಮಕ್ಕಳಿಗೆ ದೇಶದ ಇತಿಹಾಸ ಹಾಗೂ ದೇಶಾಭಿಮಾನ ಕುರಿತ ಶಿಕ್ಷಣ ಅಗತ್ಯ. ಇಂತಹ ಕಾರ್ಯಕ್ರಮಗಳಿಂದ ಕನ್ನಡ ನಾಡು-ನುಡಿ, ಭಾಷೆ ಹಾಗೂ ದೇಶ ಕುರಿತಂತೆ ಒಳ್ಳೆ ಪರಿಕಲ್ಪನೆ ನೀಡುತ್ತದೆ. ಹಿರಿಯರ ತ್ಯಾಗ, ಬಲಿದಾನದಿಂದ ಇಂದು ಸ್ವತಂತ್ರ ಭಾರತದಲ್ಲಿ ನಾವು ಬದುಕಿದ್ದು, ಅದರ ಘನತೆ ಉಳಿಸಬೇಕು. ಮಕ್ಕಳು ನಮ್ಮ ನಾಡಿನ ಭವಿಷ್ಯವಾಗಿದ್ದು, ಅವರಲ್ಲಿ ಒಳ್ಳೆ ಭಾವನೆಗಳನ್ನು ಬಿತ್ತಬೇಕಾಗಿದೆ ಎಂದರು.
ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಭಾಗವಹಿಸಿದ್ದ ಆರ್‌ಎಲ್‌ಎಸ್ ಪ್ರೌಢಶಾಲೆ ತಂಡ ಪ್ರಥಮ, ಮಲ್ಲಸಜ್ಜನ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಹಾಗೂ ಸರ್ಕಾರಿ ಪ್ರೌಢ ಶಾಲೆ ತೃತೀಯ ಬಹುಮಾನ ಪಡೆದವು. ಪ್ರಜೆಂಟೇಷನ್ ಬಾಲಕಿಯರ ಪ್ರೌಢಶಾಲೆ ಹಾಗೂ ಅಂಜುಮನ್ ಪ್ರೌಢಶಾಲೆ ತಂಡಗಳು ಸಮಾಧಾನಕರ ಬಹುಮಾನ ಪಡೆದವು.
ಪ್ರಾಥಮಿಕ ಶಾಲಾ ಮಕ್ಕಳ ವಿಭಾಗದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಂಡ ಪ್ರಥಮ, ಜೆಎಸ್‌ಎಸ್ ಕನ್ನಡ ಮಾಧ್ಯಮ ಶಾಲೆ ದ್ವಿತೀಯ, ವಿದ್ಯಾರಣ್ಯ ಪ್ರಾಥಮಿಕ ಶಾಲೆ ತೃತೀಯ ಸ್ಥಾನ ಪಡೆದವು. ನಿರ್ಣಾಯಕರಾಗಿ ಅನೀಲ ಮೇತ್ರಿ ಹಾಗೂ ಮಲ್ಲಮ್ಮ ದಳವಾಯಿ ಆಗಮಿಸಿದ್ದರು.
ಶಂಕರ ಕುಂಬಿ ಸ್ವಾಗತಿಸಿದರು. ವಿಶ್ವೇಶ್ವರಿ ಹಿರೇಮಠ ಪ್ರಾಸ್ತವಿಕವಾಗಿ ಮಾತನಾಡಿದರು. ಆಶಾ ಸೈಯದ ನಿರೂಪಿಸಿದರು. ಮೇಘಾ ಹುಕ್ಕೇರಿ ವಂದಿಸಿದರು.