ಚನ್ನಪಟ್ಟಣ: ಮಕ್ಕಳ ಮನಸ್ಸು ಮುಕ್ತ ಹಾಗೂ ಪರಿಶುದ್ಧವಾಗಿರುತ್ತದೆ. ಅಂತಹ ಮನಸ್ಸಿನಲ್ಲಿ ಕೋಮುಭಾವನೆ ಬಿತ್ತಿ ಕಲುಷಿತ ವಾತಾವರಣ ಮೂಡಿಸಬಾರದು ಎಂದು ಮಾಜಿ ಸಿಎಂ ಎಚ್.ಡಿ.ಕುವಾರಸ್ವಾಮಿ ತಿಳಿಸಿದರು.
ತಾಲೂಕಿನ ಬೊಮ್ಮನಾಯಕ್ಕನಹಳ್ಳಿಯಲ್ಲಿ ಸೋಮವಾರ ಚೌಡೇಶ್ವರಿ ದೇವಾಲಯ ಉದ್ಘಾಟನಾ ಸವಾರಂಭದಲ್ಲಿ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೆಲದಿನಗಳಿಂದ ಹಿಜಾಬ್‌ನ ಪರ ಹಾಗೂ ವಿರೋಧದ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತದೆ. ಎರಡೂ ರಾಷ್ಟ್ರೀಯ ಪಕ್ಷಗಳು ಮತ ಪಡೆಯುವ ಸಲುವಾಗಿ ಶಾಲಾ ಮಕ್ಕಳಲ್ಲಿ ಸಂಕುಚಿತ ಮನೋಭಾವನೆ ಬಿತ್ತಿ ದ್ವೇಷ ರಾಜಕಾರಣದ ಬೆಂಕಿ ಹಚ್ಚುತ್ತಿದ್ದಾರೆ ಎಂದು ಟೀಕಿಸಿದರು.
ಕರಾವಳಿ ಪ್ರದೇಶದ ಒಂದು ಶಾಲೆಯಲ್ಲಿ ಹೊಸದಾಗಿ ಹಿಜಾಬ್ ಸಂಸ್ಕೃತಿ ತರಲು ಕೆಲವರು ಹೊರಟಿದ್ದಾರೆ. ಕುಂದಾಪುರ ಶಾಲೆಯಲ್ಲಿ ಈ ಸಂಸ್ಕೃತಿಯನ್ನು ಹಲವು ವರ್ಷದಿಂದ ಬಿಟ್ಟಿದ್ದರು. ಕೆಲವು ಸಂಟನೆಗಳು ಕೆಲವು ಹೆಣ್ಣುಮಕ್ಕಳಿಗೆ ಪ್ರೇರೇಪಣೆ ಮಾಡುತ್ತಿದ್ದಾರೆ, ಈ ಪ್ರಕರಣವನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಬಳಸಿಕೊಳ್ಳುತ್ತಿವೆ. ಸಮಾಜದಲ್ಲಿ ಬೇರೆ ಸಮಸ್ಯೆಗಳು ಸಾಕಷ್ಟಿವೆ. ಅದರ ಮೇಲೆ ಗಮನಹರಿಸಬೇಕು. ರಾಷ್ಟ್ರೀಯ ಪಕ್ಷಗಳು ಮತ ಪಡೆಯಲು ಒಂದೊಂದು ಸವಾಜಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುವುದು ಒಳ್ಳೆಯದಲ್ಲ. ಈ ವಿಚಾರದಲ್ಲಿ ಸವಾಜ ಒಡೆಯುವ ಕೆಲಸ ಆಗಬಾರದು ಎಂದರು.
ಕೇಸರಿ ಬಟ್ಟೆ ಹಾಕಿದ ತಕ್ಷಣ, ಹಿಜಾಬ್ ಧರಿಸಿದಾಕ್ಷಣ ಸವಾಜ ಉದ್ಧಾರ ಆಗುವುದಾ ಎಂದು ಪ್ರಶ್ನಿಸಿದ ಕುವಾರಸ್ವಾಮಿ, ಮಕ್ಕಳಿಗೆ ಬದುಕಲು ದಾರಿ ತೋರಿಸಿ. ಕ್ಷುಲ್ಲಕ ವಿಚಾರದ ಮೂಲಕ ಸಮಾಜವನ್ನು ಎತ್ತ ಒಯ್ಯುತ್ತಿದ್ದೀರಿ. ಧಾರ್ಮಿಕತೆ ಉಳಿಸಿಕೊಳ್ಳುವುದನ್ನು ಜನತೆ ನಿಮ್ಮಿಂದ ಹೇಳಿಸಿಕೊಳ್ಳಬೇಕಾ ಎಂದರು.
ಮಕ್ಕಳು ಬಲಿಯಾಗಬೇಡಿ: ಕೆಲವು ಸಂಟನೆಗಳ ಚಿತಾವಣೆಗೆ ಮಕ್ಕಳು ಬಲಿಯಾಗಬಾರದು. ನಮ್ಮ ದೇಶದ ಧಾರ್ಮಿಕ ಸಂಸ್ಕೃತಿಯನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ. ನೆಮ್ಮದಿಯಾಗಿ ಕಲಿಕೆಯ ಕಡೆ ಗಮನಕೊಡಿ ಎಂದು ಕುಮಾರಸ್ವಾಮಿ ಸಲಹೆ ನೀಡಿದರು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ನಾನು ಇನ್ನೊಂದು ಕರೆ ಕೊಡಬೇಕಾಗುತ್ತದೆ. ನಮ್ಮ ರೈತ ಮಕ್ಕಳು ಹಳ್ಳಿಯಲ್ಲಿ ಹಸಿರು ಟವಲ್ ಹಾಕಿಕೊಂಡು ಶಾಲೆಗೆ ಹೋಗಿ ಎನ್ನಬೇಕಾಗುತ್ತದೆ ಎಂದರು.