ಜಿಲ್ಲೆ

ಮಕ್ಕಳನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿ

ಮೇಲುಕೋಟೆ: ಕಲೆ, ಸಂಗೀತ, ನಾಟಕ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಕ್ಕಳನ್ನು ಪಾಲಕರು ಪ್ರೋತ್ಸಾಹಿಸಬೇಕು ಎಂದು ಪಾಂಡವಪುರ ತಹಸೀಲ್ದಾರ್ ಸಂತೋಷ್ ತಿಳಿಸಿದರು.

ಗುರುವಾರ ಮೇಲುಕೋಟೆಯ ಎಸ್.ಇ.ಟಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ದೃಶ್ಯ ಟ್ರಸ್ಟ್ ಮತ್ತು ಅರಿವು ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಿಗರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಮಕ್ಕಳ ಜೀವನಕ್ಕೆ ಓದು ಎಷ್ಟು ಮುಖ್ಯವೋ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳೂ ಅಷ್ಟೇ ಮುಖ್ಯ. ಸದಾ ಮನಸ್ಸು ಉಲ್ಲಾಸಿತವಾಗಿರಲು ಮಕ್ಕಳು ಚಿತ್ರಕಲೆ, ನಾಟಕ, ಸಂಗೀತ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಸಾಂಸ್ಕೃತಿಕ ಕಲಿಕೆ ಮಕ್ಕಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ. ಪಾಲಕರು ಪ್ರಚಾರ ಮತ್ತು ಸ್ಪರ್ಧೆಗಾಗಿ ಮಾತ್ರ ಮಕ್ಕಳನ್ನು ತಯಾರು ಮಾಡುವ ಬದಲು ನಿಜವಾದ ಕಲಿಕೆಯನ್ನು ಒದಗಿಸಿಕೊಡಬೇಕು ಎಂದರು.

ಇತ್ತೀಚೆಗೆ ಮಕ್ಕಳಿಗೆ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆ ದೊರೆಯುವುದೇ ಅಪರೂಪವಾಗಿದ್ದು, ಸಿಗುವ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಪಾಂಡವಪುರದಲ್ಲಿ ಮಕ್ಕಳಿಗೆ ನಾಟಕ ಕಲಿಸಿ, ಪ್ರದರ್ಶನ ಏರ್ಪಡಿಸಿದ್ದರೂ ಸಾಕಷ್ಟು ಪ್ರಚಾರ ಮಾಡಿಯೂ ಪ್ರೇಕ್ಷಕರ ಕೊರತೆ ಕಾಡಿತು. ಕಲೆ, ಸಾಹಿತ್ಯ ಸಂಸ್ಕೃತಿಯ ಉತ್ತೇಜನಕ್ಕಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರೋತ್ಸಾಹಿಸಿದರೆ ಮಾತ್ರ ನಮ್ಮ ಸಂಸ್ಕೃತಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಕನ್ನಡ ಸಂಸ್ಕೃತಿ ಇಲಾಖೆಯ ಮಂಡ್ಯ ಉಪ ನಿರ್ದೇಶಕ ಡಾ.ನಂದೀಶ್ ಮಾತನಾಡಿ, ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಲು ಕನ್ನಡ ಸಂಸ್ಕೃತಿ ಇಲಾಖೆ ಚಿಗುರು ಕಾರ್ಯಕ್ರಮ ರೂಪಿಸಿ 8 ರಿಂದ 14ವರ್ಷ ವಯೋಮಾನದ ಶಾಲಾ ಮಕ್ಕಳಿಗೆ ಮೂರು ವಿಭಾಗದಲ್ಲಿ ಪ್ರತಿಭೆಗೆ ಅವಕಾಶ ಕಲ್ಪಿಸುತ್ತಿದೆ. ಒಂದು ವಿಭಾಗದಲ್ಲಿ 5 ತಂಡಗಳು ಪ್ರದರ್ಶನ ನೀಡಲು ಅವಕಾಶವಿದ್ದು, ಭಾಗವಹಿಸುವ ತಂಡಗಳಿಗೆ ಗೌರವ ಸಂಭಾವನೆ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಂಡ್ಯ ಬಾಲ ಕಲಾವಿದರಿಂದ ನಗಾರಿಮೇಳ, ವಿಕಸನ ಮಕ್ಕಳಿಂದ ಬೊಮ್ಮನಹಳ್ಳಿ ಕಿಂದರ ಜೋಗಿ ನಾಟಕ ದೊಡ್ಡಬ್ಯಾಡರಹಳ್ಳಿ ಮಕ್ಕಳಿಂದ ಏಕಪಾತ್ರ ಅಭಿನಯ, ಮಳವಳ್ಳಿ ಮಕ್ಕಳ ತಂಡದಿಂದ ಭರತನಾಟ್ಯ ಸಮೂಹ ನೃತ್ಯ ಎಸ್.ಇ.ಟಿ ಪಬ್ಲಿಕ್ ಶಾಲೆ ಮಕ್ಕಳಿಂದ ಜನಪದಗೀತೆ ಕಾರ್ಯಕ್ರಮಗಳು ನಡೆದವು.

ಅಧ್ಯಕ್ಷತೆಯನ್ನು ಎಸ್.ಇ.ಟಿ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ವೆಂಕಟರಾಮೇಗೌಡ ವಹಿಸಿದ್ದರು. ಮೇಲುಕೋಟೆ ದೃಶ್ಯ ಟ್ರಸ್ಟ್ ಗಿರೀಶ್, ಮಂಡ್ಯದ ಅರುವು ಟ್ರಸ್ಟ್ ಅಧ್ಯಕ್ಷೆ ಅರುಣಾ ಈಶ್ವರ್, ವಿಕಸನ ಸಂಸ್ಥೆಯ ದತ್ತು ಜೋಗುಳ ವ್ಯವಸ್ಥಾಪಕಿ ಅನಸೂಯಾ, ಶಿಕ್ಷಕ ನಂಜುಂಡಸ್ವಾಮಿ ಮತ್ತಿತರರು ಭಾಗವಹಿಸಿದ್ದರು.