ಮೈಸೂರು: ಶಿಕ್ಷಣ ಪ್ರತಿ ಮಗುವಿನ ಮೂಲಭೂತ ಹಕ್ಕು. ಅವರಿಗೆ ಉತ್ತಮ ಶಿಕ್ಷಣ ಕೊಡಿಸುವುದು ಪಾಲಕರ ಕರ್ತವ್ಯ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿಶ್ವೇಶ್ವರನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಮೂಹಿಕ ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣದ ಜತೆಯಲ್ಲೇ ಕಲೆ, ಕ್ರೀಡೆ, ಸಂಗೀತ ಸೇರಿದಂತೆ ಯಾವ ಕ್ಷೇತ್ರದಲ್ಲಿ ಪ್ರತಿಭಾವಂತರು ಎಂದು ಅರಿತು ಪ್ರಾಥಮಿಕ ಹಂತದಲ್ಲೇ ಪಾಲಕರು ಮನೆಯಿಂದ ಪ್ರೋತ್ಸಾಹ ನೀಡಬೇಕು. ಇದರಿಂದ ಮಕ್ಕಳು ಮುಖ್ಯವಾಹಿನಿಗೆ ಬಂದು ದೇಶದ ಅತ್ಯುತ್ತಮ ವ್ಯಕ್ತಿಯಾಗಿ ನಿರ್ಮಾಣವಾಗುತ್ತಾರೆ ಎಂದರು.
ಪುರಾಣದಲ್ಲಿ ಪಾರ್ವತಿದೇವಿ ತನ್ನ ಮಗು ಗಣೇಶನಿಗೂ ಅಕ್ಷರಾಭ್ಯಾಸ ಕಲಿಸಿದ ಉಲ್ಲೇಖವಿದೆ. ಮಗು ಪಾಲಕರಿಂದ ಕಲಿತ ಮೊದಲ ಅಕ್ಷರದಲ್ಲಿರುವ ಆಸಕ್ತಿ, ಶ್ರಮಪಟ್ಟ ಕನಸನ್ನು ಕಂಡ ತಂದೆ-ತಾಯಂದಿರು ಅದೇ ರೀತಿಯಲ್ಲೇ ಸನ್ಮಾರ್ಗದ ಕಡೆ ಮಗು ಬೆಳೆಯುವಂತೆ ನೋಡಿಕೊಳ್ಳುವುದು ಕರ್ತವ್ಯವಾಗಿದೆ.
ಶಿಕ್ಷಣಕ್ಕೆ ಅಂತ್ಯವಿಲ್ಲ. ತಂತ್ರಜ್ಞಾನ ಮುಂದಿನ ಪೀಳಿಗೆ ಕಾಲಮಾನಕ್ಕೆ ತಕ್ಕಂತೆ ಪ್ರತಿದಿನ ಸಮಾಜದಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ತಿಳಿಯುತ್ತಲೇ ಇರಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆದ ನಂತರದಲ್ಲಿ ಅದನ್ನು ಮತ್ತೊಬ್ಬರಿಗೆ ವಿದ್ಯಾದಾನ ಮಾಡಲು ಮುಂದಾಗಬೇಕು ಎಂದು ಹೇಳಿದರು.
ಸಾಮೂಹಿಕ ವಿವಾಹವನ್ನು ಸರಳ ರೀತಿಯಲ್ಲಿ ಸರ್ಕಾರದ ವತಿಯಿಂದ ತಂದಿರುವ ಸಪ್ತಪದಿ ಯೋಜನೆಯಂತೆ ಅಕ್ಷರಾಭ್ಯಾಸ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆಯಿಂದ ರಾಜ್ಯದ ಎಲ್ಲ ಶಾಲೆಗಳಲ್ಲೂ ಹಮ್ಮಿಕೊಳ್ಳುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು.
100ಕ್ಕೂ ಹೆಚ್ಚು ಮಕ್ಕಳು ಅಕ್ಷರಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ಪಾಲಕರು ಮಕ್ಕಳಿಗೆ ವಿದ್ಯಾರಂಭ ಮಾಡಿಸಿ ಭಕ್ತಿಯನ್ನು ಸಮರ್ಪಿಸಿ ನಂಬಿಕೆಯನ್ನು ಪುನರುಜ್ಜೀವನಗೊಳಿಸಿದರು. ಸರಸ್ವತಿ ಪೂಜೆ ಮಾಡಿ ಅಕ್ಕಿ ಕಾಳಿನಲ್ಲಿ ಓಂಕಾರ ಮತ್ತು ಗಣೇಶನಾಮ ಹಾಗೂ ಅ ಆ ಇ ಈ ಮುಂತಾದವುಗಳನ್ನು ಬರೆಸಲಾಯಿತು. ಅರ್ಚಕರಾದ ನಾಗರಾಜ್ ಶಾಸ್ತ್ರಿ ಹಾಗೂ ರಾಘವೇಂದ್ರ ಅಕ್ಷರಾಭ್ಯಾಸ ಮಾಡಿಸಿದರು.
ವಿಪ್ರ ಮುಖಂಡ ಕೆ.ರಘುರಾಮ್ ವಾಜಪೇಯಿ, ಮಹರ್ಷಿ ಪಬ್ಲಿಕ್ ಶಾಲೆಯ ತೇಜಸ್ ಶಂಕರ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂಅಯ್ಯಂಗಾರ್, ಶ್ರೀ ದುರ್ಗಾ ಫೌಂಡೇಷನ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಜೆಡಿಎಸ್ ಕಾರ್ಯಾಧ್ಯಕ್ಷ ಎಸ್.ಪ್ರಕಾಶ್ ಪ್ರಿಯದರ್ಶನ್, ಮುಖಂಡರಾದ ಎಸ್.ಎನ್.ರಾಜೇಶ್, ಖುಷಿ, ಸವಿತಾ ಘಾಟ್ಕೆ, ಜಯಶ್ರೀ ಶಿವರಾಮ್, ವಿದ್ಯಾ, ಪುಷ್ಪಾ, ರುಕ್ಮಿಣಿ, ಪ್ರಾಂಶುಪಾಲರಾದ ಗೋಪಾಲಸ್ವಾಮಿ, ಬಿ.ಎನ್.ಅನಿತಾ, ಪ್ರಿಯಾಂಕಾ ಇದ್ದರು.