ಹಾಸನ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಜವಬ್ದಾರಿಯುತವಾಗಿ ನೋಡಿಕೊಳ್ಳಬೇಕಾಗಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಸಲಹೆ ನೀಡಿದರು.
ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿಲ್ಲಾ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಒಗ್ಗಟ್ಟಿನಲ್ಲಿ ಬಲವಿದ್ದು, ಈ ನಿಟ್ಟಿನಲ್ಲಿ ಶಿಕ್ಷಕರು ಇಂತಹ ಕಾರ್ಯಕ್ರಮದಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಬೇಕು. ಮಕ್ಕಳಿಗೆ ಯಾವ ರೀತಿ ಶಿಕ್ಷಣ ಕೊಡಬೇಕು ಎಂಬುದು ಇಂದು ಸವಾಲಾಗಿದೆ. ಶಿಕ್ಷಕರು ಕೂಡ ಈ ನಿಟ್ಟಿನಲ್ಲಿ ತಯಾರಾಗಬೇಕು ಎಂದು ಹೇಳಿದರು.
ಬಾಲಗಂಗಾಧರ ನಾಥ ಸ್ವಾಮೀಜಿ ಗುರುಗಳಿಗೆ ಮಹತ್ವದ ಸ್ಥಾನ ನೀಡಿದ್ದರು. ಎಲ್ಲಿ ಜೇನಿನ ಸಿಹಿ ಇರುತ್ತದೆಯೋ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಇರುತ್ತಾರೆ. ಹಾಗೆ ಖಾಸಗಿ ಶಿಕ್ಷಣ ಸಂಸ್ಥೆಯವರು ಉತ್ತಮವಾಗಿ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆ ಇಲ್ಲ ಎಂದಿದ್ದರೆ 20 ಪರ್ಸೇಂಟ್ ಮಕ್ಕಳು ವಿದ್ಯಾವಂತರಾಗುತ್ತಿರಲಿಲ್ಲ. ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಇಂದು ಶಿಕ್ಷಣ ಸಂಸ್ಥೆ ಕಟ್ಟಿ ಬೆಳೆಸುವುದು ತುಂಬಾ ಕಷ್ಟಕರವಾಗಿದೆ. ಇದಕ್ಕೆ ಶ್ರಮವನ್ನು ಹಾಕಬೇಕಾಗಿದೆ ಎಂದು ಹೇಳಿದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ದೇಶದ ಅಭಿವೃದ್ಧಿಗೆ ಖಾಸಗಿ ಹಾಗೂ ಅನುದಾನರಹಿತ ಶಾಲೆಗಳ ಕೊಡುಗೆ ಅಪಾರವಾಗಿದೆ. ಖಾಸಗಿ ಶಾಲೆಗಳು ಅನೇಕ ಇಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಹತ್ತಾರು ಸವಾಲುಗಳ ನಡುವೆಯೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿ ಸ್ಥಾನದಲ್ಲಿರುವ ಖಾಸಗಿ ಶಾಲೆಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಸರ್ಕಾರದ ಕಠಿಣ ನಿಯಮಗಳು ಖಾಸಗಿ ಅಥವಾ ಅನುದಾನ ರಹಿತ ಶಾಲೆಗಳನ್ನು ನಡೆಸಲು ಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ನಾನು ಎಂದಿಗೂ ನಿಮ್ಮ ಪರವಾಗಿ ನಿಂತು ನನ್ನ ವ್ಯಾಪ್ತಿಯಲ್ಲಿ ಬಗೆಹರಿಸಬಹುದಾದ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಡುವುದಾಗಿ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಒಂದು ಇಎಸ್‌ಐ ಆಸ್ಪತ್ರೆ ಸ್ಥಾಪನೆ ಹಾಗೂ ಸರ್ಕಾರದ ಕೆಲವು ನಿಯಮಗಳ ಸಡಿಲಿಕೆ ಬಗ್ಗೆ ಖಾಸಗಿ ಶಾಲೆಗಳ ಸಂಘ ಈಗಾಗಲೇ ತಮಗೆ ಮನವಿ ನೀಡಿದೆ. ಅವುಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಹೇಳಿದರು.
ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡಿ ಅವರ ಭವಿಷ್ಯದ ಉತ್ತಮ ಶಿಲ್ಪಿಯಾಗಿ ರೂಪಿಸುವಲ್ಲಿ ಹಾಗೂ ಸಮಾಜವನ್ನು ಸರಿದಾರಿಗೆ ತರಲು ಶಿಕ್ಷಕರ ಪಾತ್ರ ಮಹತ್ವವಾದುದು. ಸಮಾಜವನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಅತಿ ದೊಡ್ಡದು. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರು ಬಹುದೊಡ್ಡ ಕೊಡುಗೆ ನೀಡುತ್ತಾ ಬಂದಿದ್ದಾರೆ. ಅಂತಹ ಗುರುಗಳಿಗೆ ತಮ್ಮ ನುಡಿ ನಮನ ಸಲ್ಲಿಸುವೆ ಎಂದು ಹೇಳಿದರು.
ಸರ್ಕಾರಿ ಶಾಲೆಗಳಂತೆಯೇ ಇಂದು ಖಾಸಗಿ ಶಾಲೆಗಳೂ ಸಂಕಷ್ಟದಲ್ಲಿವೆ. ಶಿಕ್ಷಕರಿಗೂ ಹಲವು ರೀತಿಯ ಸಮಸ್ಯೆ ಇವೆ. ಆದರೂ ಅವೆಲ್ಲವನ್ನೂ ಮೀರಿ ನಿಂತು ಮಕ್ಕಳಿಗೆ ಅಕ್ಷರ ಜ್ಞಾನ ನೀಡಿ, ಅವರನ್ನು ಭವಿಷ್ಯದ ಉತ್ತಮ ಶಿಲೆಯಾಗಿಸಲು ಶ್ರಮಿಸುತ್ತಿರುವುದು ನಿಜಕ್ಕೂ ಅಭಿವಂದನೀಯ. ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಶಿಕ್ಷಕರ ಕೆಲಸ ನಿಜಕ್ಕೂ ದೇವರು ಮೆಚ್ಚುವ ಕೆಲಸ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ. ಮುಂದಿನ ದಿನಗಳಲ್ಲಿ ನಿಮ್ಮ ಆರ್ಥಿಕ ಶಕ್ತಿ ಸುಧಾರಣೆಯಾಗಲಿ. ಎಲ್ಲಾ ಸಂದರ್ಭದಲ್ಲೂ ಶಿಕ್ಷಕರ ಜತೆ ತಾವು ಇರುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಸಂಸದ ಶ್ರೇಯಸ್ ಪಟೇಲ್ ಹಾಗೂ ಶಾಸಕ ಎಚ್.ಪಿ. ಸ್ವರೂಪ್ ಪ್ರಕಾಶ್ ಅವರನ್ನು ಶಾಲಾ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಉತ್ತಮ ಶಿಕ್ಷಕರನ್ನು ಅವರ ಸೇವೆ ಪರಿಗಣಿಸಿ ಅಭಿನಂದಿಸಲಾಯಿತು. ಜತೆಗೆ ಅರವಿಂದ ಶಾಲೆ ಸಂಸ್ಥಾಪಕ ದಿವಂಗತ ಬಿ.ಕೆ. ರಂಗಸ್ವಾಮಿ ಹಾಗೂ ಮೃತಪಟ್ಟ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಿಗೆ ಸಂತಾಪ ಸೂಚಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಇಒ ಡಾ.ಎನ್. ಶಿವರಾಮರೆಡ್ಡಿ, ಹುಸ್ಮಾ ಗೌರವಾಧ್ಯಕ್ಷ ಎಚ್.ಎಸ್. ಅನಿಲ್ ಕುಮಾರ್, ಉಪಾಧ್ಯಕ್ಷೆ ತಾರಾ ಎಸ್. ಸ್ವಾಮಿ, ಅಧ್ಯಕ್ಷ ಬಿ.ಈ. ಶಿವರಾಮೇಗೌಡ, ಶಾಸಕ ಸಿಮೆಂಟ್ ಮಂಜು, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಡಿಡಿಪಿಐ ಎಚ್.ಕೆ. ಪಾಂಡು, ಟೈಮ್ಸ್ ಗ್ರೂಪ್ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಸೇರಿದಂತೆ ಇತರರಿದ್ದರು.