ಜಿಲ್ಲೆ

ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ

ಸೋಮವಾರಪೇಟೆ: ಮಕ್ಕಳನ್ನು ಸಮಾಜದ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಾದ ಜವಾಬ್ದಾರಿ ನಮ್ಮಲ್ಲಿದೆ. ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಕಳುಹಿಸುವಂತಹ ಮಕ್ಕಳ ಸಂಖ್ಯೆ ಇಂದು ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.


ಪುಷ್ಪಗಿರಿ ಜೇಸಿ ಸಂಸ್ಥೆಯ ಮಹಿಳಾ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಗುರುವಾರ ಸ್ಥಳೀಯ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ನಮ್ಮ ಸಂಭ್ರಮ-2023 ಕಾರ್ಯಕ್ರಮದಲ್ಲಿ ಮಾತನಾಡಿದರು.


ಸಮಾಜದಲ್ಲಿ ಸ್ತ್ರೀ ಪುರುಷರು ಸಮಾನರು. ನಮ್ಮ ಮಕ್ಕಳಿಗೆ ಮಾನವೀಯ ಮೌಲ್ಯವುಳ್ಳ ಗುಣಗಳನ್ನು ಕಲಿಸಬೇಕು. ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಲು ಪಾಲಕರು ಪ್ರಯತ್ನಿಸಬೇಕು ಎಂದರು.


ಮುಂಚೂಣಿ: ಕೊಡಗಿನ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ಇದಕ್ಕಾಗಿ ಇಡೀ ಸಮಾಜವೇ ಹೆಮ್ಮೆ ಪಡುವಂತಾಗಿದೆ ಎಂದು ಜೇಸಿ ಸಂಸ್ಥೆಯ ವಲಯ 14ರ ಮಹಿಳಾ ಸಂಚಾಲಕಿ ಮಧುರಾ ಮಲೋಡೆ ಅಭಿಪ್ರಾಯಪಟ್ಟರು.


ಕೊಡಗಿನ ಮಣ್ಣಿನ ಗುಣವೇ ನಮ್ಮನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ. ಇಲ್ಲಿನ ಪರಿಸರವೇ ನಮಗೆ ಬರೆಯಲು ಸ್ಫೂರ್ತಿದಾಯಕ. ಈ ನೆಲದಲ್ಲಿಯೇ ಕಥೆಗಾರ್ತಿ ಕೊಡಗಿನ ಗೌರಮ್ಮ ಹೆಣ್ಣಿನ ಶೋಷಣೆಯ ವಿರುದ್ಧ ತಮ್ಮ ಬರವಣಿಗೆಯ ಮೂಲಕವೇ ಮೌನವಾಗಿ ಧ್ವನಿ ಎತ್ತಿದ್ದರು. ಇಂದೂ ಮಹಿಳೆಯರಿಗೆ ಸ್ವಾತಂತ್ರ್ಯ ಇದೆ. ಆದರೆ ಇದು ದುರ್ಬಳಕೆ ಆಗಬಾರದು. ನಾವು ನಮ್ಮ ಮುಂದಿನ ತಲೆಮಾರಿಗೆ ಉತ್ತಮ ಸಂದೇಶವನ್ನು ನೀಡಬೇಕು ಎಂದರು.


ಜೇಸಿ ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರಾ, ಮಹಿಳಾ ಸಮಾಜದ ಅಧ್ಯಕ್ಷೆ ಸುಮಾ ಸುದೀಪ್, ನಿಕಟಪೂರ್ವ ಅಧ್ಯಕ್ಷ ನೆಲ್ಸನ್ ಡಿಸೋಜ, ಕಾರ್ಯದರ್ಶಿ ಜಗದಾಂಬ ಇದ್ದರು. ಇದೇ ಸಂದರ್ಭ ಸಾಹಿತ್ಯ ಕೇತ್ರ ಸೇವೆಗಾಗಿ ಹಂಚೆಟ್ಟೀರ ಫ್ಯಾನ್ಸಿ ಮುತ್ತಣ್ಣ, ಭಾರತೀಯ ಸೇನೆಯ ಸೇವೆಗಾಗಿ ಬಿ.ಪಿ.ವೇದವತಿ, ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಎಸ್.ಎಸ್.ಶಾಶ್ವತಿ, ಕೃಷಿ ಕ್ಷೇತ್ರದ ಸಾಧನೆಗಾಗಿ ಎಚ್.ಸಿ.ಪ್ರಮೀಳಾ, ಸ್ವಉದ್ದಿಮೆಯಲ್ಲಿ ಸಾಧನೆ ಮಾಡಿದ ಪಾರ್ವತಿ ಅಣ್ಣಯ್ಯ ಅವರನ್ನು ಜೇಸಿ ಪಂಚರತ್ನ ಪುರಸ್ಕಾರ ನೀಡಿ ಗೌರವಿಸಲಾಯಿತು.