ತುಮಕೂರು: ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವರೇ ಹೆಚ್ಚು. ಆದರೆ ಕ್ಯಾತಸಂದ್ರದ ಸರ್ಕಾರಿ ಪ್ರೌಢಶಾಲೆ ಶಾಲೆಯ ಗೋಡೆಗಳ ಮೇಲಿನ ಚಿತ್ತಾರಗಳು ಮಕ್ಕಳ ಮನಸನ್ನು ಮುದಗೊಳಿಸುವುದರ ಜತೆಗೆ ಜ್ಞಾನವೃದ್ಧಿಗೆ ಪೂರಕವಾಗಿರುವುದು ವಿಶೇಷವೆನಿಸಿದೆ. ಬುಡಕಟ್ಟು ಜನಾಂಗದ ಜಾನಪದ ಚಿತ್ರಕಲೆ ಎನಿಸಿರುವ ವರ್ಲಿಶೈಲಿಯ ಚಿತ್ರಕಲೆಗಳು ಮಕ್ಕಳನ್ನು ಆಕರ್ಷಿಸುತ್ತಿವೆ.
ಇಂತಹ ವೈಶಿಷ್ಟೃಪೂರ್ಣ ಕಲೆಯ ಚಿತ್ತಾರಗಳನ್ನು ಕ್ಯಾತಸಂದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಾಣಬಹುದು. ಕರೊನಾ ಆಘಾತದಿಂದ ವರ್ಷವಿಡೀ ಸ್ಥಗಿತಗೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳು ಪುನರಾರಂಭವಾಗುವ ಸಮಯಕ್ಕೆ ಮುನ್ನ ಶಾಲೆ ಗೋಡೆಗಳನ್ನು ಸಿಂಗರಿಸುವ ಮೂಲಕ ಮಕ್ಕಳ ಮನಸುಗಳನ್ನು ಅರಳಿಸುವ ಚಿತ್ರಕಲಾ ಶಿಕ್ಷಕ ಕೋಟೆ ಕುಮಾರ್ ಪ್ರಯತ್ನ ಕೈಗೂಡಿದೆ.
ಕರೊನಾ ಸಂಕಷ್ಟದ ದಿನಗಳಲ್ಲಿ ವಿದ್ಯಾಗಮ ಯೋಜನೆ ಮೂಲಕ ಊರು, ಕೇರಿ, ಹಳ್ಳಿ, ಹಳ್ಳಿಗಳಿಗೆ ತೆರಳಿ ಶಿಕ್ಷಣ ನೀಡಿದ ಶಿಕ್ಷಕರು, ಸೋಂಕಿನ ಬಗ್ಗೆ ಮಕ್ಕಳ ಮನೆಮನೆಗೆ ತೆರಳಿ ಪಾಲಕರಿಗೆ, ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಜತೆಗೆ ಅಕ್ಷರ ದಾಸೋಹದ ದವಸ ಧಾನ್ಯಗಳನ್ನು ವಿತರಿಸುವ ಕಾರ್ಯ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಶಾಲೆ ದುರಸ್ತಿ ಜತೆಗೆ ಬಹಳ ವರ್ಷಗಳಿಂದ ಸುಣ್ಣಬಣ್ಣವೇ ಕಾಣದ ಶಾಲಾ ಕೊಠಡಿಗಳಿಗೆ ಶಿಕ್ಷಕರೇ ಬಣ್ಣ ಬಳಿದು ಸಿಂಗರಿಸಿರುವ ಉದಾಹರಣೆಗಳೂ ಇವೆ.
ಅಕ್ಷರ ದಾಸೋಹ, ಕ್ಷೀರಭಾಗ್ಯ, ಬಾ ಬಾಲೆ ಶಾಲೆಗೆ, ರಾಷ್ಟ್ರೀಯ ಹಸಿರುಪಡೆ, ವಿಜ್ಞಾನದ ಆವಿಷ್ಕಾರ, ಹೆಣ್ಣುಮಕ್ಕಳನ್ನು ಓದಿಸಿ, ಪರಿಸರ ಜಾಗೃತಿ, ಶಾಲಾ ಶೈಕ್ಷಣಿಕ ಪ್ರವಾಸ, ಗ್ರಂಥಾಲಯದ ಮಹತ್ವ, ಕ್ರೀಡಾ ಮಹತ್ವ ಹೀಗೆ ಹತ್ತು ಹಲವು ಯೋಜನೆಗಳ ಮಹತ್ವಗಳನ್ನು ಸಾರುವ ದೃಶ್ಯಗಳನ್ನು ಚಿತ್ರಿಸಿ ಗೋಡೆಗಳನ್ನು ಚಿತ್ತಾಕರ್ಷಣೆಗೊಳಿಸಿದ್ದಾರೆ. ಅಲ್ಲದೆ, ನಾಡಹಬ್ಬ, ನಾಗರಪಂಚಮಿ, ಧ್ಯಾನಸ್ಥ ಬುದ್ಧನ ಚಿತ್ರಗಳು ಮಕ್ಕಳ, ನೋಡುಗರ ಮನಸ್ಸಿನ ಮೇಲೆ ಜ್ಞಾನ ಮತ್ತು ಶಾಂತತೆ ಮೂಡಿಸುವಂತಿದೆ.
ಮುಖ್ಯಶಿಕ್ಷಕಿ ಎಸ್.ಆರ್.ಪ್ರಮೀಳಾ ಹಾಗೂ ಎಲ್ಲಾ ಶಿಕ್ಷಕ, ಸಿಬ್ಬಂದಿಯ ಸಹಕಾರದಿಂದಾಗಿ ಶಾಲೆಯಲ್ಲಿ ಸುಂದರ ಪರಿಸರ ನಿರ್ಮಿಸಲು ಸಾಧ್ಯವಾಗಿದೆ. ಮಕ್ಕಳ ಜ್ಞಾನವೃದ್ಧಿಗೂ ಇದು ಪೂರಕವಾಗಿದೆ ಎನ್ನುತ್ತಾರೆ ಕೋಟೆಕುಮಾರ್.
ಅಸ್ತಿತ್ವವನ್ನೇ ಅಲುಗಾಡಿಸಿದ ವರ್ಷ : 2020 ಮರೆಯಲಾಗದ, ಮನಷ್ಯನ ಅಸ್ತಿತ್ವವನ್ನೇ ಅಲುಗಾಡಿಸಿದ ವರ್ಷ. ಅದರಲ್ಲೂ ಶೈಕ್ಷಣಿಕ ಕ್ಷೇತ್ರ ಘಾಸಿಗೊಂಡ ವರ್ಷ, ಶಾಲೆಗಳಿಲ್ಲದೆ ಮಕ್ಕಳು ಮನೆಯಲ್ಲಿಯೇ ಬಂಧಿಯಾದ ವರ್ಷ. ಆದರೂ, ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಕ್ಯಾತಸಂದ್ರದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸಮೂಹ ಸಾಕ್ಷಿಯಾಗಿದೆ. ಕರುನಾಡ ವಿಜಯಸೇನೆ ಅಧ್ಯಕ್ಷ ದೀಪಕ್ ಹ.ನಿ., ಸುಧೀರ್, ನಾಗರಾಜು ಶಾಲೆಗಳಿಗೆ ಸುಣ್ಣಬಣ್ಣ ಬಳಸಿಕೊಟ್ಟು ನೆರವಾಗಿದ್ದಾರೆ.
ವರ್ಲಿಶೈಲಿ ಚಿತ್ರಕಲೆ : ವರ್ಲಿಶೈಲಿ ಚಿತ್ರಕಲೆ ಜಾನಪದ ಕಲೆಯಾಗಿದೆ. ಮುಂಬೈನ ಸಮೀಪದ ವರ್ಲಿ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದ್ದ ಬುಡಕಟ್ಟು ಜನಾಂಗದವರು ಮಣ್ಣಿನಲ್ಲಿ ಗೋಡೆಗಳನ್ನು ನಿರ್ಮಿಸಿಕೊಂಡು ಕಟ್ಟಿಕೊಳ್ಳುವ ಗೂಡುಗಳನ್ನು ಸಿಂಗರಿಸುತ್ತಿದ್ದ ಚಿತ್ರಕಲೆ ಇದಾಗಿದೆ. ಈ ಶೈಲಿಯನ್ನು ಬಳಸಿಕೊಂಡು ಶಿಕ್ಷಣ ಇಲಾಖೆ ಯೋಜನೆಗಳ ಮಹತ್ವ ಸಾರುವುದು ಕೋಟೆಕುಮಾರ್ ಪ್ರಯತ್ನವಾಗಿದೆ.
ಶಿಕ್ಷಣ ಯೋಜನೆಗಳ ಮಹತ್ವ ಸಾರಲು ಬುಡಕಟ್ಟು ಜನಾಂಗದವರ ವರ್ಲಿಶೈಲಿಯ ಚಿತ್ರಕಲೆಗಳನ್ನು ಶಾಲೆ ಗೋಡೆಗಳ ಮೇಲೆ ಬಿಡಿಸಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಈ ಕೆಲಸ ಕೈಗೊಂಡಿದ್ದು ನಮ್ಮ ಎಲ್ಲ ಶಿಕ್ಷಕರು ಆರ್ಥಿಕವಾಗಿ ನೆರವು ನೀಡಿದರು. ಮಕ್ಕಳ ಮನಸನ್ನು ಮುದುಗೊಳಿಸುವ ಉದ್ದೇಶ ಇದಾಗಿದೆ. ಕೋಟೆಕುಮಾರ್, ಚಿತ್ರಕಲಾ ಶಿಕ್ಷಕ